ಹೂಮಳೆ
ಮೊದಲ ಮಳೆಗೆ ಪುಳಕ ಹೊಂದಿ
ಮುದದಿ ಅರಳಿ ನಿಂತಿವೆ
ಎದೆಯ ತುಂಬೆ ಬಣ್ಣ ಬೀರಿ
ಉದಯ ಕಾಲ ನಗುತಿವೆ ..
ಗುಡುಗು ಮಿಂಚು ಮೂಡಿದಾಗ
ತಡವ ಮಾಡಿ ನಿಲ್ಲದೆ
ಪೊಡವಿಯೊಳಗೆ ಮುದುಡಿ ಇರದೆ
ಬೆಡಗ ತೋರಿ ಕಂಡಿದೆ..
ಹಲವು ದಿವಸ ಕಾಲ ಬಾಳಿ
ಚೆಲುವ ಚೆಲ್ಲಿ ನಕ್ಕಿವೆ..
ಮಳೆಯ ಕಾಲ ಬಂತು ಎಂದು
ಇಳೆಗೆ ಸಾರಿ ಹೇಳಿವೆ..
ಸೋನೆ ಸುರಿದು ನೆಲವು ತಂಪು
ಬೇನೆ ದೂರ ಸರಿಯಲು..
ಕಾನ ಕಾನು ಗಿರಿಯ ತುಂಬ
ಗಾನದಿಂಪು ಹೂಗಳು..
ಮಣ್ಣಿನಿಂದ ಜನ್ಮ ತಾಳಿ
ಕಣ್ಣ ತುಂಬಿ ಸೊಗಸಿದೆ
ತಣ್ಣಗಾದ ಭೂಮಿ ಸೇರಿ
ಮಣ್ಣ ಸಾರ ತುಂಬಿದೆ..
===============
ಚೆಲುವೆಲ್ಲ (ಏಳೆ ಕವನ)
ತಳಿತಿಹ ಮಾಮರ ಕಳೆಯನು ಕಾಣಿಸೆ
ಮೊಳಗಿದೆ ಪಿಕದ ಸಂಗೀತ.
ಬಲಿತಿಹ ಮಿಡಿಗಳು ಸೆಲೆಯದು ಹಸಿರಿನ
ಕಲೆತಿಹ ಹಕ್ಕಿ ಸಮ್ಮೇಳ
ಬಿಡದಿಯ ರಚಿಸಿವೆ ಬೆಡಗಿನ ಬಾನಾಡಿ
ದುಡಿಯುತ ಬದುಕು ಹಸನಾಗೆ
ಮಲ್ಲಿಗೆ ಹಂದರ ಸೊಲ್ಲದು ಸುಂದರ
ಮೆಲ್ಲಗೆ ಕೇಳಿ ಕಿವಿಯಾರೆ ..
ಹರಿಯುವ ತೊರೆಗಳ ಸರದಲಿ ಗಾಯನ
ಕರ ಸುಖ ಕಿವಿಗೆ ಮನ ತುಂಬಿ..
ಮೊಲ್ಲೆಯ ಮುಡಿದಿಹ ನಲ್ಲೆಯ ಕಾಣಲು
ಮಲ್ಲಿಗೆ ಹಸಿತ ಮೊಗದಲ್ಲಿ..
ಕಮಲದ ದಳಗಳು ಕಮಲಿಯ ಕಂಗಳು
ಸುಮದಂತೆ ಮನದ ನಳಿನಾಕ್ಷಿ
ಮೈಯಲಿ ಗಂಧವು ಕೈಯಲಿ ಬಳೆಗಳು
ಗೈಯುವ ವೇಳೆ ಬಳೆ ನಾದ..
ಮನದನ್ನೆ ನಡೆವಾಗ ಮನಸನು ಸೆಳೆವಳು
ದನಿಗಳು ಹೊಮ್ಮಿ ಕಾಲ್ಗೆಜ್ಜೆ..