Tuesday, July 23, 2024

ರಾಜ್ಯದಲ್ಲಿ ಹೆಚ್‌ಐವಿ ಸೋಂಕಿತರ ಪ್ರಮಾಣ ಏರಿಕೆ: ಯುವಕರೇ ಹೆಚ್ಚಾಗಿ ಏಡ್ಸ್ ರೋಗಕ್ಕೆ ತುತ್ತು

ಕಳೆದ ಕೆಲವು ವರ್ಷಗಳ ಮುನ್ನ ಜಾಗತಿಕವಾಗಿ ಭಯ ಹುಟ್ಟಿಸಿದ್ದ ಎಚ್​ಐವಿ ಏಡ್ಸ್ (HIV AIDS) ಖಾಯಿಲೆ ಕಳೆದ ಕೆಲವಾರು ವರ್ಷಗಳಿಂದ ಅಷ್ಟಾಗಿ ವರದಿಯಾಗಿರಲಿಲ್ಲ. ಆದರೆ ಇತ್ತೀಚೆಗೆ ರಾಜ್ಯದಲ್ಲಿ ಹೆಚ್ಚಾಗಿರುವುದು ಆತಂಕ ಹೆಚ್ಚಿಸಿದೆ.

ವಿಶ್ವಾದ್ಯಂತ ಸುಮಾರು 40 ದಶಲಕ್ಷಕ್ಕೂ ಅಧಿಕ ಜನ ಈ ಸೋಂಕು ಪೀಡಿತರಾಗಿದ್ದಾರೆ. ಸರ್ಕಾರವೂ ಇದರ ನಿಯಂತ್ರಣಕ್ಕೆ ಸತತ ಪ್ರಯತ್ನ ಮಾಡುತ್ತಲೇ ಇದೆ. ಆದರೆ ಜನರ ಜಾಗೃತಿ ಕೊರತೆ, ಏಡ್ಸ್ ಬಗ್ಗೆ ಕಡಿಮೆಯಾಗುತ್ತಿರುವ ಭಯ ಈಗ ಮತ್ತೆ ಯುವಕರಲ್ಲಿ ಏಡ್ಸ್ ಏರಿಕೆಗೆ ಕಾರಣವಾಗಿದೆ.

ರಾಜ್ಯದಲ್ಲಿ ಎಚ್ಐವಿ ಸೋಂಕಿತರು ಅತಿ ಹೆಚ್ಚು ಬೆಂಗಳೂರು ನಗರದಲ್ಲಿಯೇ ಪತ್ತೆಯಾಗುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಅದರಲ್ಲೂ ಅವಿವಾಹಿತರಲ್ಲಿಯೇ ಎಚ್​ಐವಿ ಸೋಂಕು ಹೆಚ್ಚಾಗುತ್ತಿದೆ. ಮದುವೆಗೂ ಮುನ್ನವೇ ಯುವಕರಲ್ಲಿ ಎಚ್​ಐವಿ ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿದೆ. ರಾಜ್ಯದಲ್ಲಿ 1.85 ಲಕ್ಷ ಸೋಂಕಿತರಿದ್ದಾರೆ. ಇದರಲ್ಲಿ ನವವಿವಾಹಿತರೇ ಹೆಚ್ಚಿದ್ದಾರೆ.

ಬೆಂಗಳೂರಿನಲ್ಲಿ ಶೇ 20 ರಿಂದ 25 ರಷ್ಟು ಯುವಕರಲ್ಲಿಯೇ ಸೋಂಕು ಕಾಣಿಸಿಕೊಂಡಿದೆ. 14 ವರ್ಷಕ್ಕಿಂತ ಕೆಳಗಿನ ವಯಸ್ಸಿನವರಲ್ಲಿಯೂ ಈಗ ಹೆಚ್ಚಾಗಿ ಎಚ್​ಐವಿ ಕಂಡುಬರುತ್ತಿದೆ. ರಾಜ್ಯದಲ್ಲಿ ಬೆಂಗಳೂರು ಹಾಗೂ ಕೋಲಾರ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಅತಿಯಾದ ಮಾದಕ ವ್ಯಸನ ಹಾಗೂ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಹೆಚ್ಚಾಗಿ ಏಡ್ಸ್ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಶಾಲೆ ಹಾಗೂ ಕಾಲೇಜುಗಳಲ್ಲಿ ಕೂಡಾ ಈ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ ಎಂದು ಆರೋಗ್ಯ ಇಲಾಖೆಯ ಯೋಜನಾ ನಿರ್ದೇಶಕ ಡಾ. ನಾಗರಾಜ್ ತಿಳಿಸಿದ್ದಾರೆ.

Related Articles

Latest Articles