ಪ್ರೀತಿಗೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ. ಕಿರಿಯರು, ಹಿರಿಯರು, ಬಣ್ಣ, ಜಾತಿ, ಮತ, ಲಿಂಗ ಎಂಬ ಭೇದವೂ ಇಲ್ಲ ಎಂಬಂತಾಗಿದೆ. ಎಷ್ಟೋ ಜೋಡಿಗಳನ್ನು ನೋಡಿ ನಾವು ಹುಬ್ಬೇರಿಸಿದ್ದೂ ಉಂಟು. ಇದೀಗ ಅಂಥದ್ದೇ ಜೋಡಿಯೊಂದು ಸುದ್ದಿಯಲ್ಲಿದೆ.
ಹುಡುಗಿಯೊಬ್ಬಳು ತನ್ನ ಅಜ್ಜನ ವಯಸ್ಸಿನ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದ ಅಪರೂಪದ ಘಟನೆ ಚೀನಾದಿಂದ ವರದಿಯಾಗಿದೆ.
ಆಡಿಟಿ ಸೆಂಟ್ರಲ್ ವೆಬ್‌ಸೈಟ್‌ನ ವರದಿಯ ಪ್ರಕಾರ ಹೆಬೈ ಪ್ರಾಂತ್ಯದ ವೃದ್ಧಾಶ್ರಮ ಒಂದರಲ್ಲಿ ಸ್ವಯಂಸೇವಕಳಾಗಿ ಕೆಲಸ ಮಾಡುತ್ತಿದ್ದ 23 ವರ್ಷದ ಯುವತಿ, 80 ವರ್ಷದ ವ್ಯಕ್ತಿಯನ್ನು ಭೇಟಿಯಾದರು. ಆರಂಭದ ಪರಿಚಯ ದಿನಗಳ ಬಳಿಕ ಸ್ನೇಹಕ್ಕೆ ತಿರುಗಿದೆ. ಇಬ್ಬರು ಒಟ್ಟಿಗೆ ಸಮಯ ಕಳೆಯಲು ಆರಂಭಿಸಿದ್ದಾರೆ. ಕ್ರಮೇಣ ಇಬ್ಬರ ಸ್ನೇಹ, ಪ್ರೀತಿಯ ಸ್ವರೂಪವನ್ನು ಪಡೆದುಕೊಂಡಿದೆ.
ವರದಿಗಳ ಪ್ರಕಾರ, ಮುದುಕನ ಪ್ರಬುದ್ಧತೆ, ಸ್ಥಿರತೆ ಮತ್ತು ಬುದ್ಧಿವಂತಿಕೆಗೆ ತಾನು ಆಕರ್ಷಿತಳಾಗಿದ್ದೇನೆ ಎಂದು ಹುಡುಗಿ ಹೇಳಿದ್ದಾಳೆ. ಅದೇ ಸಮಯದಲ್ಲಿ ಯುವತಿಯ ದಯೆ ಮತ್ತು ದೈಹಿಕ ಸೌಂದರ್ಯದಿಂದ ಪ್ರಭಾವಿತಳಾಗಿದ್ದೇನೆ ಎಂದು ವೃದ್ಧ ಹೇಳಿದ್ದಾರೆ. ಇಬ್ಬರೂ ಪರಸ್ಪರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದು, ಇಬ್ಬರೂ ಪರಸ್ಪರ ಮದುವೆಯಾಗಲು ಬಯಸಿದರು. ಆದರೆ, ಇವರಿಬ್ಬರ ನಿರ್ಧಾರಕ್ಕೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದರು.
ಯುವತಿ ತನ್ನ ಪ್ರೀತಿಯ ಬಗ್ಗೆ ಪಾಲಕರಿಗೆ ತಿಳಿಸಿದಾಗ, ಮುದುಕನ ಜತೆ ಮಗಳ ಮದುವೆ ಮಾಡಿಕೊಡಲು ಒಪ್ಪಲೇ ಇಲ್ಲ. ಆದರೆ, ಯುವತಿ ತನ್ನ ಪಾಲಕರನ್ನು ಧಿಕ್ಕರಿಸಿ, ಮನೆಯಿಂದ ಹೊರಬಂದು ಇತ್ತೀಚೆಗೆ ವೃದ್ಧನನ್ನು ಮದುವೆಯಾಗಿದ್ದಾಳೆ. ಈ ಮದುವೆಗೆ ಹುಡುಗಿಯ ಸಂಬಂಧಿಕರು ಯಾರೂ ಬಂದಿರಲಿಲ್ಲ. ಮದುವೆಯ ಸಮಯದಲ್ಲಿ, ತಾವಿಬ್ಬರು ಪರಸ್ಪರ ಬೇರ್ಪಡಿಸುವುದಿಲ್ಲ ಎಂದು ಭರವಸೆಗಳನ್ನು ವಿನಿಮಯ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಈ ಮದುವೆಗೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇಯಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಮದುವೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯುವತಿಯು ಹಣಕ್ಕಾಗಿ ವೃದ್ಧನನ್ನು ಮದುವೆಯಾಗಿರಬಹುದು ಎನ್ನುತ್ತಿದ್ದಾರೆ.