Monday, September 16, 2024

ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯೆಗೆ ಹೃದಯಾಘಾತವಾಗಿ ಮೃತ್ಯು

ವೈದ್ಯೆಯೊಬ್ಬರು ಚಿಕಿತ್ಸೆ ನೀಡುತ್ತಿರುವ ವೇಳೆಯೇ ಹೃದಯದ ನೋವಿನಿಂದ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಈ ದುರಂತ ಘಟನೆ ನಡೆದಿದೆ.

ಡಾ. ಶಶಿಕಲಾ ಚಿಕಿತ್ಸೆ ನೀಡುತ್ತಿದ್ದ ವೇಳೆ ಮೃತಪಟ್ಟವರು. ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಮೆಡಿಸಿನ್ ವಿಭಾಗದ ವೈದ್ಯರಾಗಿರುವ ಡಾ. ಶಶಿಕಲಾ ಅವರು ರೋಗಿಗೆ ಚಿಕಿತ್ಸೆ ನೀಡುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಅವರಿಗೆ 60 ವರ್ಷ ಆಗಿತ್ತು.

ಶಶಿಕಲಾ ಅವರು 2022ರ ಫೆಬ್ರವರಿಯಲ್ಲಿ ವಯೋ ನಿವೃತ್ತಿ ಹೊಂದಿದ್ದರು. ಆದರೆ, ವೈದ್ಯರಿಲ್ಲದ ಹಿನ್ನೆಲೆಯಲ್ಲಿ ಅವರನ್ನು ಹೊರಗುತ್ತಿಗೆಯಲ್ಲಿ ಮುಂದುವರಿಸಲಾಗಿತ್ತು. ಅವರು ಹೊರರೋಗಿಗಳ ವಿಭಾಗದಲ್ಲಿ ಪ್ರಮುಖವಾಗಿ ರೋಗಿಗಳನ್ನು ನೋಡುತ್ತಿದ್ದರು.

ಗುರುವಾರ ಅವರು ಜಿಲ್ಲಾಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ಸೇವೆ ನೀಡುತ್ತಿದ್ದ ವೇಳೆ ಒಮ್ಮೆಗೇ ಕುಸಿದು ಬಿದ್ದರು. ರೋಗಿಗೆ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲೇ ಕುಸಿದು ಬಿದ್ದಿದ್ದ ಶಶಿಕಲಾ ಅವರನ್ನು ಕೂಡಲೇ ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿದರು. ಆದರೆ, ಶಶಿಕಲಾ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಪ್ರಾಣ ಕಳೆದುಕೊಂಡರು. ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Latest Articles