Tuesday, June 25, 2024

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್

ಹಾವೇರಿ: ತನ್ನ ಜೀಪ್ ಚಾಲಕನ ಮೂಲಕ 12 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ರಾಣೆಬೆನ್ನೂರು ತಹಶೀಲ್ದಾರ್ ಹನುಮಂತ ಶಿರಹಟ್ಟಿ ಅವರು ಶುಕ್ರವಾರ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಎರಡು ಲಾರಿಗಳನ್ನು ಬಿಡಲು ತಹಶೀಲ್ದಾರ್ ಹನುಮಂತ ಶಿರಹಟ್ಟಿ ಅವರು 12 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಇಂದು ಅವರ ಜೀಪ್ ಚಾಲಕ ಮಾಲತೇಶ್ ಮಡಿವಾಳರ 12 ಸಾವಿರ ರೂಪಾಯಿ ಪಡೆದುಕೊಂಡು, ರಾಣೆಬೆನ್ನೂರು ನಗರದ ವೀರಭಧ್ರೇಶ್ವರ ಬಡಾವಣೆಯಲ್ಲಿರುವ ತಹಶೀಲ್ದಾರ್ ಮನೆಯಲ್ಲಿ ಹನುಮಂತ ಶಿರಹಟ್ಟಿ ಅವರಿಗೆ ಕೊಡುವ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ರಾಣೆಬೆನ್ನೂರಿನ ಮಂಜುನಾಥ್ ವಾಲೀಕಾರ ಅವರಿಗೆ ಸೇರಿದ ಎರಡು ಲಾರಿಗಳು ಅಕ್ರಮ ಮರಳು ಸಾಗಣೆ ಮಾಡುತ್ತಿವೆ ಎಂಬ ಆರೋಪದ ಮೇಲೆ ಇತ್ತೀಚಿಗೆ ವಶಕ್ಕೆ ಪಡೆಯಲಾಗಿತ್ತು. ಈ ಎರಡು ಲಾರಿಗಳನ್ನು ಬಿಡುಗಡೆ ಮಾಡಲು ತಹಶೀಲ್ದಾರ್ 12 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಲೋಕಾಯುಕ್ತ ಡಿವೈಎಸ್ ಪಿ ಚಂದ್ರಶೇಖರ್ ನೇತೃತ್ವದಲ್ಲಿ ಇಂದು ತಹಶೀಲ್ದಾರ್ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಹನುಮಂತ ಶಿರಹಟ್ಟಿ ಹಾಗೂ ಮಾಲತೇಶ್ ಮಡಿವಾಳರ ಅವರನ್ನು ವಶಕ್ಕೆ ಪಡೆದಿದ್ದಾರೆ.

Related Articles

Latest Articles