Saturday, June 22, 2024

ಗ್ರಾಮ ಮುಖಂಡನಿಂದ ಜಾತಿನಿಂದನೆ: ಪ್ರಿನ್ಸಿಪಾಲ್‌ ಆತ್ಮಹತ್ಯೆ

ಗುಜರಾತಿನ ಹಳ್ಳಿಯೊಂದರ ಗ್ರಾಮ ಮುಖಂಡನಿಂದ ಜಾತಿ ನಿಂದನೆಗೊಳಗಾದ್ದರಿಂದ ಮನನೊಂದ ಶಾಲಾ ಪ್ರಾಂಶುಪಾಲರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಮೊದಲು ವಿಡಿಯೋ ಮಾಡಿರುವ ಅವರು ಗ್ರಾಮದ ಸರಪಂಚ್ ತನಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

52 ವರ್ಷದ ಕಾಂತಿ ಚೌಹಾಣ್ ಅವರು ಆತ್ಮಹತ್ಯೆ ಮಾಡಿಕೊಂಡವರು. ಅವರು ವಿಷ ಸೇವಿಸುವ ಮೊದಲು ವೀಡಿಯೊ ರೆಕಾರ್ಡ್ ಮಾಡಿದ್ದು, ಗ್ರಾಮದ ಸರಪಂಚ್ ಜಾತಿಯ ಆಧಾರದ ಮೇಲೆ ತನಗೆ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

“ನಾನು ಕೆಳ ಜಾತಿಯಿಂದ ಬಂದಿದ್ದೇನೆ, ಆದರೆ ನಾನು ಕಲಿಸುವ ಕೆಲಸವನ್ನು ಮಾಡುತ್ತಿದ್ದೇನೆ. ದಯವಿಟ್ಟು ಅದನ್ನು ನನ್ನಿಂದ ಕಿತ್ತುಕೊಳ್ಳಬೇಡಿ. ನೀವು ನಮ್ಮ ಜಾತಿಯನ್ನು ಅಸ್ತ್ರವಾಗಿ ಬಳಸಿಕೊಂಡು ನಮ್ಮನ್ನು ಕೆಣಕಲು ಪ್ರಯತ್ನಿಸುತ್ತಿದ್ದೀರಿ. ಸರಪಂಚ್ ಆಗಿರುವ ನಿಮಗೆ ಇದು ನಾಚಿಕೆಗೇಡಿನ ಸಂಗತಿ” ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

“ಸರಪಂಚ್ ಬೆದರಿಕೆ ಹಾಕುತ್ತಿದ್ದಾರೆ. ನಾನು ಪಡೆದಿರುವ ಅನುದಾನವನ್ನು ನೀಡುವಂತೆ ಕೇಳುತ್ತಿದ್ದಾರೆ. ಗ್ರಾಮಸ್ಥರು ಇರುವ ವಾಟ್ಸಪ್‌ ಗುಂಪುಗಳಲ್ಲಿ ನನ್ನ ಮತ್ತು ನನ್ನ ಜಾತಿಯ ಬಗ್ಗೆ ಅವಹೇಳನಕಾರಿ ಮೆಸೇಜ್‌ ಮಾಡಿದ್ದಾರೆ”ಎಂದು ಅವರು ಆರೋಪಿಸಿದ್ದಾರೆ.

ಸರಪಂಚ್ ನನ್ನು ಮುಕೇಶ್ ಬೋರಿಸಾಗರ್ ಎಂದು ಗುರುತಿಸಲಾಗಿದ್ದು, ಆತ ಗುಜರಾತ್ ಸರ್ಕಾರವು ಗ್ರಾಮದಲ್ಲಿ ಇತರ ಉದ್ದೇಶಗಳಿಗಾಗಿ ವಿತರಿಸಿದ ಶಾಲಾ ಆಡಳಿತ ಸಮಿತಿ (SMC) ಹಣವನ್ನು ಬೇರೆಡೆಗೆ ಬಳಸಲು ಚೌಹಾಣ್ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ.

ಪ್ರಾಂಶುಪಾಲರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ದಲಿತ ಸಂಘಟನೆಗಳು ಹಾಗೂ ದಲಿತ ಸಮುದಾಯದ ಸದಸ್ಯರು ಪೊಲೀಸ್‌ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

ಪೊಲೀಸರು ಸರಪಂಚ್ ಮುಖೇಶ್ ಬೋರಿಸಾಗರ್, ಮೂವರು ಶಿಕ್ಷಕರು – ರಂಜನ್ ಲಾಥಿಯಾ, ಹಂಸಾ ಟ್ಯಾಂಕ್ ಮತ್ತು ಭಾವನಾ – ಮತ್ತು ವಿಪುಲ್ ಕ್ಯಾಡಾ ಎಂಬ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಗಾಗಿ ಪ್ರಕರಣ ದಾಖಲಿಸಿದ್ದಾರೆ.

Related Articles

Latest Articles