Friday, July 19, 2024

ಸರ್ಕಾರದ ವಿವಿಧ ತೆರಿಗೆ ವಸೂಲಿ ಮಾಡಲಿದೆಯಾ ಸ್ವ ಸಹಾಯ ಸಂಘ..? ತೆರಿಗೆ ಬಾಕಿ ವಸೂಲಿಗೆ ಹೊಸ ಪ್ಲಾನ್

ಆಸ್ತಿತೆರಿಗೆ, ನೀರಿನ ಬಿಲ್ ಬಾಕಿ ವಸೂಲಿಗೆ ನೋಟಿಸ್ ನೀಡಿ ಸುಸ್ತಾದ ಸರ್ಕಾರ, ಇದೀಗ ಹೊಸ ಯೋಜನೆಗೆ ಮುಂದಾಗಿದೆ. ಬಾಕಿ ತೆರಿಗೆ ವಸೂಲಿ ಮಾಡಲು ಸ್ವಸಹಾಯ ಸಂಘಗಳ ಮೊರೆ ಹೋಗಿರುವ ಸರ್ಕಾರ, ರಾಜ್ಯದ ಎನ್​ಜಿಒಗಳು, ಸ್ವಸಹಾಯ ಸಂಘಗಳ ಮೂಲಕ ತೆರಿಗೆ ಬಾಕಿ ವಸೂಲಿ ಮಾಡಿಸಲು ಸಜ್ಜಾಗಿದೆ. ಈ ಬಗ್ಗೆ ಸಚಿವ ಸಂಪುಟದಲ್ಲೂ ಚರ್ಚೆ ನಡೆದಿದ್ದು ಸಂಪುಟದಿಂದ ಕೂಡ ಹಸಿರು ನಿಶಾನೆ ಸಿಕ್ಕಿದ್ದಾಗಿ ಟಿವಿ9 ಕನ್ನಡ ವರದಿ ಮಾಡಿದೆ.

ಸದ್ಯ ಪಾಲಿಕೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಂದ ಆಸ್ತಿ ತೆರಿಗೆ ಒಟ್ಟು 1,860.17 ಕೋಟಿ ರೂ. ಬಾಕಿ ಇದೆ. ಇದನ್ನ ವಸೂಲಿ ಮಾಡಲು ಮುಂದಾಗಿರುವ ಸರ್ಕಾರ, ಬಾಕಿ ವಸೂಲಿ ಜವಾಬ್ದಾರಿಯನ್ನು ಸ್ವಸಹಾಯ ಸಂಘಗಳು ಹಾಗೂ ಎನ್​​ಜಿಒಗಳಿಗೆ ವಹಿಸಲು ಸಜ್ಜಾಗಿದೆ.

ಇದಕ್ಕೆ ಪ್ರತಿಯಾಗಿ ಸ್ವಸಹಾಯ ಸಂಘಗಳಿಗೆ ವಸೂಲಿಯಾದ ಹಣದ ಶೇಕಡ 5 ರಷ್ಟು ಪಾಲನ್ನ ಕಮಿಷನ್ ಆಗಿ ಕೊಡುವುದಕ್ಕೂ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಹೆಚ್​​ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.

315 ನಗರ ಸ್ಥಳೀಯ ಸಂಸ್ಥೆಗಳು, 10 ಮಹಾನಗರ ಪಾಲಿಕೆಗಳು, 61 ನಗರ ಸಭೆಗಳು, 114 ಪಟ್ಟಣ ಪಂಚಾಯಿತಿಗಳು ಹಾಗೂ 4 ಅಧಿಸೂಚಿತ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ವಸೂಲಿಯ ಹೊಣೆಯನ್ನ ಸ್ವಸಹಾಯ ಸಂಘಗಳಿಗೆ ವಹಿಸೋಕೆ ತಯಾರಿ ನಡೆದಿದ್ದು, ಆ ಮೂಲಕ ಸರ್ಕಾರದ ಬೊಕ್ಕಸ ತುಂಬಿಸಿಕೊಳ್ಳಲು ಸಿದ್ಧತೆ ನಡೆದಿದೆ.

Related Articles

Latest Articles