ವಿಧಾನಸಭೆ ಸಚಿವಾಲಯದಿಂದ ರಾಜ್ಯದ ಆಡಳಿತ ಮತ್ತು ಪ್ರತಿಪಕ್ಷಗಳ ಎಲ್ಲ 224 ಶಾಸಕ, ಸಚಿವರಿಗೆ ಸರ್ಕಾರದ ಗಂಡಭೇರುಂಡ ಲಾಂಛನವುಳ್ಳ ಚಿನ್ನ ಲೇಪಿತ ಬ್ಯಾಡ್ಜ್‌ಗಳನ್ನು ವಿತರಿಸಲಾಗಿದೆ.
ಬೆಂಗಳೂರಿನ ಐ ಡ್ರೀಮ್ಸ್ ಟ್ರೇಡ್ ಅಂಡ್ ಈವೆಂಟ್ ಲಿಮಿಟೆಡ್ ಕಂಪನಿಯಿಂದ ತಲಾ 2832 ರೂ. ನಂತೆ ಈ ಬ್ಯಾಡ್ಜ್‌ಗಳನ್ನು ಖರೀದಿ ಮಾಡಲಾಗಿದೆ. ಮುಂದಿನ ಅಧಿವೇಶನದಿಂದ ಎಲ್ಲ ಸದಸ್ಯರು ಕಡ್ಡಾಯವಾಗಿ ಈ ಬ್ಯಾಡ್ಜ್ ಧರಿಸಿ ಸದನಕ್ಕೆ ಹಾಜರಾಗುವಂತೆ ಸ್ಪೀಕರ್ ಯು.ಟಿ.ಖಾದರ್ ಸೂಚಿಸಿದ್ದಾರೆ.
ಬುಧವಾರ ವಿಧಾನಸಭೆ ಕಾರ್ಯಕಲಾಪದ ವೇಳೆ ಈ ಬಗ್ಗೆ ಮಾಹಿತಿ ಪ್ರಕಟಿಸಿದ ಸ್ಪೀಕರ್, ಇವತ್ತು ವಿಧಾನಸೌಧಕ್ಕೆ ಬರುವವರೆಲ್ಲರೂ ಶಾಸಕ, ಸಚಿವರ ರೀತಿಯಲ್ಲೇ ಉಡುಪು ಧರಿಸಿ ಬರುತ್ತಾರೆ. ಹಾಗಾಗಿ ಮುಂದಿನ ವಿಧಾನಸಭೆ ಅಧಿವೇಶನಕ್ಕೆಎಲ್ಲ ಸದಸ್ಯರೂ ಈ ಬ್ಯಾಡ್ಜ್ ಕಡ್ಡಾಯವಾಗಿ ಧರಿಸಿ ಬರಬೇಕು. ಇದರಿಂದ ನಮ್ಮ ಗಾರ್ಡ್‌ಗಳಿಗೂ ಶಾಸಕರನ್ನು ಗುರುತಿಸಲು ನೆರವಾಗುತ್ತದೆ ಎಂದು ತಿಳಿಸಿದರು.
ಸಚಿವಾಲಯದಿಂದ ಎಲ್ಲ ಸದಸ್ಯರಿಗೂ ಒಂದು ಕಿಟ್ ಕೊಡಲಾಗಿದೆ. ಅದರಲ್ಲಿ ಪ್ರತಿ ಸದಸ್ಯರಿಗೂ ಗಂಡಭೇರುಂಡ ಲಾಂಛನವುಳ್ಳ ಮೂರು ಬ್ಯಾಡ್ಜ್‌ಗಳನ್ನು ನೀಡಲಾಗಿದೆ. ಅದರಲ್ಲಿ ಒಂದನ್ನು ತಮ್ಮ ಊರಿನಲ್ಲಿ, ಇನ್ನೊಂದು ಬೆಂಗಳೂರಿನಲ್ಲಿ ಇಟ್ಟುಕೊಳ್ಳಬಹುದು. ಮೂರನೆಯದು ಪ್ರತಿ ದಿನ ಬಳಕೆಗೆಂದು ನೀಡಲಾಗಿದೆ. ಶಾಸಕರು ದೆಹಲಿ ಸೇರಿದಂತೆ ಬೇರೆ ಬೇರೆ ಕಡೆ ಕಾರ್ಯಕ್ರಮಗಳಿಗೆ ಹೋಗುವಾಗ ಗೌರವ ಸೂಚಕವಾಗಿ ಈ ಬ್ಯಾಡ್ಜ್ ಧರಿಸಿ ಹೋಗಬಹುದು ಎಂದರು.