1968ರಲ್ಲಿ ಹಿಮಾಚಲ ಪ್ರದೇಶದ ರೋಹಟಗ್ ಪಾಸ್ ಬಳಿ ಭೀಕರ ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದ ನಾಲ್ವರ ಮೃತದೇಹ ಪತ್ತೆಯಾಗಿದೆ. ಫೆಬ್ರವರಿ 7, 1968ರಂದು ಚಂಡಿಗಢದಿಂದ 102 ಸೈನಿಕರನ್ನು ಹೊತ್ತುಕೊಂಡ ಸೇನಾ ವಿಮಾನ ಟೇಕಾಫ್ ಆಗಿತ್ತು. ಆದ್ರೆ ಪ್ರತಿಕೂಲ ಹವಾಮಾನದ ಕಾರಣದಿಂದ ಹಿಮಾಚಲ ಪ್ರದೇಶದ ರೋಹಟಗ್ ಪಾಸ್ ಬಳಿ ಪತನಗೊಂಡಿತ್ತು.
ರೋಹಟಗ್ ಪಾಸ್ ಹಿಮದಲ್ಲಿ ವಿಮಾನ ಸೇರಿ ಶವಗಳೆಲ್ಲವೂ ಹಿಮದಿಂದಾಗಿ ಮುಚ್ಚಿ ಹೋಗಿದ್ದವು. ಈ ಘಟನೆ ನಡೆದು ಈಗ 56 ವರ್ಷಗಳೇ ಕಳೆದಿವೆ. ಸದ್ಯ ಶೋಧ ಕಾರ್ಯದಲ್ಲಿ ನಾಲ್ವರ ಶವಗಳು ಪತ್ತೆಯಾಗಿವೆ. ನಾಲ್ಕು ಮೃತದೇಹ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ.
1968 ರಂದು ಮಿಲಿಟರಿ ಟ್ರಾನ್ಸ್ಫೋರ್ಟ್ ವಿಮಾನದಲ್ಲಿ ಹೋಗುತ್ತಿದ್ದ 102 ಸೈನಿಕರು ಮಾರ್ಗದ ಮಧ್ಯೆದಲ್ಲಿಯೇ ವಿಮಾನ ಪತನಗೊಂಡಿದ್ದರಿಂದ ಎಲ್ಲರೂ ನಾಪತ್ತೆಯಾಗಿದ್ದರು. ವಿಮಾನ ಸೇರಿ ಸೈನಿಕರು ಕೂಡ ಹಿಮದಲ್ಲಿ ಮುಚ್ಚಿ ಹೋಗಿದ್ದರು. 2003ರಲ್ಲಿ ಮೊದಲ ಬಾರಿಗೆ ವಿಮಾನದ ಅವಶೇಷಗಳು ಪತ್ತೆಯಾಗಿದ್ದವು. ಅಟಲ್ ಬಿಹಾರಿ ವಾಜಪೇಯಿ ಮೌಂಟನೇರಿಂಗ್ ಇನ್ಸ್ಟಿಟ್ಯೂಟ್ ಅವಶೇಷಗಳನ್ನು ಪತ್ತೆ ಮಾಡಿತ್ತು. ಬಳಿಕ ಸೈನಿಕರ ಶವಗಳಿಗಾಗಿ ನಿರಂತರ ಹುಡುಕಾಟ ನಡೆದಿತ್ತು. 2003 ರಿಂದ 2019ರವರೆಗೆ ಒಟ್ಟು ಐದು ಮಂದಿ ಸೈನಿಕರ ಶವಗಳು ಪತ್ತೆಯಾಗಿದ್ದವು.
ಅದಾದ ಬಳಿಕ ಈಗ ಮತ್ತೆ ನಾಲ್ವರ ಶವಗಳು ಪತ್ತೆಯಾಗಿವೆ. ಒಟ್ಟಾರೆ ಅಂದು ಭೀಕರ ದುರಂತದಲ್ಲಿ ಜೀವ ಕಳೆದುಕೊಂಡವರಲ್ಲಿ 9 ಶವಗಳು ಇಲ್ಲಿಯವರೆಗೆ ಪತ್ತೆಯಾದಂತಾಗಿದೆ. ಸೇನೆಯ ಸಿಪಾಯಿ ನಾರಾಯಣ್ ಸಿಂಗ್, ಮಾಲ್ಕನ್ ಸಿಂಗ್ ಥಾಮಸ್ ಚರಣ್ ಹಾಗೂ ಇನ್ನೋರ್ವ ಸೈನಿಕನ ಶವ ಪತ್ತೆಯಾಗಿದೆ. ಇನ್ನು ಒಂದು ಶೋಧ ಕಾರ್ಯ ಅಕ್ಟೋಬರ್ 10ರವರೆಗೂ ಮುಂದುವರಿಯಲಿದೆ ಎಂದು ಹೇಳಲಾಗಿದೆ.