ಚಂದ್ರಯಾನ-3 ಯಶಸ್ವಿಯಾದ ಬೆನ್ನಿಗೇ ಸೌರಯಾನ ಕೈಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇದೀಗ ಮತ್ತೊಂದು ಯಾನಕ್ಕೂ ತಯಾರಾಗಿ ನಿಂತಿದ್ದು ಮತ್ತೊಮ್ಮೆ ವಿಶ್ವದ ಚಿತ್ತ ತನ್ನತ್ತ ಸೆಳೆಯಲಿದೆ. ಗಗನಯಾನ ಮಾಡಲು ಇಸ್ರೋ ತಯಾರಾಗಿದೆ. ಭಾರತದ ಮೊದಲ ಮಾನವಸಹಿತ ಗಗನಯಾನದ ಅಂಗವಾಗಿ ಮಾನವರಹಿತ ಪರೀಕ್ಷಾರ್ಥ ಹಾರಾಟವನ್ನು ಇದೇ ಅಕ್ಟೋಬರ್ನಲ್ಲಿ ಇಸ್ರೋ ಕೈಗೊಳ್ಳಲಿದೆ.
ಮನುಷ್ಯರನ್ನು ಹೊತ್ತೊಯ್ಯಲಿರುವ ನೌಕೆ ಇದಾಗಿದೆ. ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ಪೂರ್ವಭಾವಿಯಾಗಿ ಕ್ರ್ಯೂ ಮಾಡೆಲ್ನ ಮಾನವರಹಿತ ಹಾರಾಟ ಪರೀಕ್ಷೆ ಇಸ್ರೋ ಅ. 25ರಂದು ನಡೆಸುವ ಸಾಧ್ಯತೆ ಹೊರಹೊಮ್ಮಿದೆ. ಅಲ್ಲದೆ, ಗಗನಯಾನದ ಕ್ರ್ಯೂ ಮಾಡೆಲ್ ಕುರಿತ ಕೆಲವು ಫೋಟೋಗಳನ್ನು ಇಸ್ರೋ ಇಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಈ ಮಿಷನ್ನ ಸಾಮರ್ಥ್ಯ ಪ್ರದರ್ಶಿಸಲು ಇಸ್ರೋ ಕ್ರ್ಯೂ ಮಾಡೆಲ್ನ ಇನ್ಫ್ಲೈಟ್ ಅಬಾರ್ಟ್ ಟೆಸ್ಟ್ ನಡೆಸಲು ಯೋಜನೆ ಹಾಕಿಕೊಂಡಿದೆ. ಇದನ್ನು ಸಾಧಿಸಿದ ನಂತರ, ಮಾನವರಹಿತ ಕಾರ್ಯಾಚರಣೆಯ ಸಿದ್ಧತೆಗಳೊಂದಿಗೆ ಮುಂದುವರಿಯಲಿರುವುದಾಗಿ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಸ್.ಉನ್ನಿಕೃಷ್ಣನ್ ನಾಯರ್ ಮಾಹಿತಿ ಹಂಚಿಕೊಂಡಿದ್ದಾರೆ.
ಮುಂಬರುವ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 (ಟಿವಿ-ಡಿ 1) ಗಗನಯಾನ ಕಾರ್ಯಕ್ರಮದ ನಾಲ್ಕು ಪ್ರಾಯೋಗಿಕ ಕಾರ್ಯಾಚರಣೆಗಳಲ್ಲಿ ಮೊದಲನೆಯದಾಗಿದೆ. ನಾಲ್ಕೂ ಪರೀಕ್ಷಾ ಫಲಿತಾಂಶ ಮತ್ತು ಮಾನವರಹಿತ ಕಾರ್ಯಾಚರಣೆಗಳ ಆಧಾರದ ಮೇಲೆ ಮಾನವಸಹಿತ ಕಾರ್ಯಾಚರಣೆಯನ್ನು ಯೋಜಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಏನದು ಗಗನಯಾನ?: ಗಗನಯಾನ ಯೋಜನೆಯು ಇಬ್ಬರು ಅಥವಾ ಮೂವರನ್ನು ಒಂದರಿಂದ ಮೂರು ದಿನಗಳ ಕಾರ್ಯಾಚರಣೆಗಾಗಿ ಭೂಮಿಯ ಸುತ್ತಲೂ ಸುಮಾರು 400 ಕಿ.ಮೀ. ವೃತ್ತಾಕಾರದ ಕಕ್ಷೆಗೆ ಕರೆದೊಯ್ದು, ಸುರಕ್ಷಿತವಾಗಿ ಭೂಮಿಗೆ ಕರೆತರುವುದಾಗಿರುತ್ತದೆ. ಈ ಮೂಲಕ ಭಾರತದ ಇನ್ನೊಂದು ಸಾಮರ್ಥ್ಯವನ್ನು ಪ್ರದರ್ಶಿಸುವುದು ಗಗನಯಾನದ ಉದ್ದೇಶ.