ರಾಜಕೀಯ ನಾಯಕರೊಬ್ಬರು ಪ್ರಚಾರದ ಭರಾಟೆಯಲ್ಲಿ ನಾಲಿಗೆ ಹರಿಬಿಟ್ಟು ಈಗ ಸಂಕಷ್ಟ ಅನುಭವಿಸುವಂತಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ತೇಜೋವಧೆ ಮಾಡಿದ ಆರೋಪದ ಮೇಲೆ ಬಿಜೆಪಿ ಐಟಿ ಸೆಲ್ ಮುಖಂಡ ಜಯಕಾಂತ್ ಶೆಟ್ಟಿ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ಪ್ರಕಾಶ್ ಹಾಗೂ ಕಾರ್ಯಕರ್ತರು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಲಾಸಿಪಾಳ್ಯ ವಿನೋಬನಗರ ನಿವಾಸಿಯಾಗಿರುವ ಜಯಕಾಂತ್ ಶೆಟ್ಟಿ ಎಂಬುವರು, ಕಾಂಗ್ರೇಸ್ ಪಕ್ಷದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಮತ್ತು ಮುಸಲ್ಮಾನರು ನಮ್ಮ ದೇಶದವರಲ್ಲ, ಸೋನಿಯಾ ಗಾಂಧಿಯವರಿಂದಲೇ ಶ್ರೀಲಂಕದಲ್ಲಿ ಎರಡು ಕೋಟಿ ಜನ ಮರಣ ಹೊಂದಿದ್ದಾರೆ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ.
ಈ ಭಾಷಣ ಹಿಂದೂ ಮುಸ್ಲಿಮರಲ್ಲಿ ಘರ್ಷಣೆ ಉಂಟು ಮಾಡಲು ಪ್ರಯತ್ನಿಸಿ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಲ್ಲದೆ, ಸೋನಿಯಾ ಗಾಂಧಿಯವರ ತೇಜೋವಧೆ ಮಾಡುವಂತಹ ಹೇಳಿಕೆ ನೀಡಿ ಮತ್ತು ಚುನಾವಣೆಯ ಲಾಭ ಪಡೆದುಕೊಳ್ಳುವ ಸಲುವಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ಜಯಕಾಂತ ಶೆಟ್ಟಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ.