Sunday, May 18, 2025

ಮಂಗಳೂರು: ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಗರಿಗರಿ ನೋಟ್ ಪ್ರಿಂಟ್‌..! ಲಾಡ್ಜ್‌ನಲ್ಲಿ ಉಳಿದುಕೊಂಡು ನಗರದಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ; ಸಿಸಿಬಿ ಪೊಲೀಸರ ಬಲೆಗೆ ಬಿದ್ದ ನಾಲ್ವರು

ಕೇರಳ ರಾಜ್ಯದಿಂದ ಮಂಗಳೂರು ನಗರಕ್ಕೆ ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ತಂಡವೊಂದನ್ನು ಪೊಲೀಸರು ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ೫೦೦ ರೂಪಾಯಿ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸರು ಅಂತಾರಾಜ್ಯ ಖೋಟಾ ನೋಟು ಚಲಾವಣೆ ಜಾಲವನ್ನು ಭೇದಿಸಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ 500 ರೂಪಾಯಿ ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸಿ ಮಂಗಳೂರು ನಗರದ ಕ್ಲಾಕ್ ಟವರ್ ಪರಿಸರದ ಲಾಡ್ಜ್ ವೊಂದರ ಪರಿಸರದಲ್ಲಿ ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಕಾಸರಗೋಡಿನ ವಿ. ಪ್ರಿಯೇಶ್(38), ವಿನೋದ್ ಕುಮಾರ್.ಕೆ(33), ಅಬ್ದುಲ್ ಖಾದರ್ ಎಸ್.ಎ(58) ಮತ್ತು ಪುತ್ತೂರಿನ ಆಯೂಬ್ ಖಾನ್ (51) ಬಂಧಿತ ಆರೋಪಿಗಳು.

ಈ ಗ್ಯಾಂಗ್‌ ನಿಂದ 2,13,500 ಮೌಲ್ಯದ 500 ರೂ. ಮುಖಬೆಲೆಯ 427 ಖೋಟಾ ನೋಟುಗಳು, ಹಾಗೂ 4 ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಿಂಟಿಂಗ್ ಪ್ರೆಸ್‌ನಲ್ಲಿ ಖೋಟಾ ನೋಟು ಪ್ರಿಂಟ್‌
ಆರೋಪಿಗಳ ಪೈಕಿ ಪ್ರಿಯೇಶ್ ಎಂಬಾತನು ಕಾಸರಗೋಡು ಜಿಲ್ಲೆಯ ಚೆರ್ಕಳ ಎಂಬಲ್ಲಿ ಪ್ರಿಂಟಿಂಗ್ ಪ್ರೆಸ್ ನ್ನು ಹೊಂದಿದ್ದಾನೆ. ಈ ಪ್ರಿಂಟಿಂಗ್ ಪ್ರೆಸ್ ನಲ್ಲಿ ಈ ಖೋಟಾ ನೋಟುಗಳನ್ನು ತಯಾರಿಸುತ್ತಿದ್ದನು. ಈ ಖೋಟಾ ನೋಟುಗಳನ್ನು ತಯಾರಿಸಲು ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ಕೇರಳದ ಕೋಝೀಕೋಡ್ ಮತ್ತು ದೆಹಲಿಯಿಂದ ಖರೀದಿಸಿಕೊಂಡು ಈ ಖೋಟಾ ನೋಟುಗಳನ್ನು ತಯಾರಿಸುವ ವಿಧಾನವನ್ನು ಯೂಟ್ಯೂಬ್ ಮೂಲಕ ವೀಕ್ಷಿಸಿ ಸುಲಭವಾಗಿ ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ ಈ ಕೃತ್ಯಕ್ಕೆ ಇಳಿದು ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿಗಳು ಈ ಖೋಟಾ ನೋಟುಗಳನ್ನು ಕೇರಳದಿಂದ ತಯಾರಿಸಿಕೊಂಡು ತಂದು ಮಂಗಳೂರು ನಗರದಲ್ಲಿ ಚಲಾವಣೆ ಮಾಡಲು ಯತ್ನಿಸುತ್ತಿದ್ದರು. ಈ ಖೋಟಾ ನೋಟು ಚಲಾವಣೆ ಜಾಲದಲ್ಲಿ ಹಲವಾರು ಮಂದಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗುತ್ತಿದೆಸ್ವಾಧೀನಪಡಿಸಿಕೊಂಡ ಸೊತ್ತುಗಳಾದ 500 ರೂಪಾಯಿ ಮುಖಬೆಲೆಯ 427 ಖೋಟಾ ನೋಟುಗಳು. (ಅಂದಾಜು ಮೌಲ್ಯ-2,13,500/) ನಗದು ಹಣ-9,030ರೂ, ಮೊಬೈಲ್ ಪೋನ್ -2 ( 30,000)ಮೊಬೈಲ್ ಪೋನ್ -1 (1,000/-) ಮೊಬೈಲ್ ಪೋನ್ -1 (10,000/-) ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಗೀತಾ ಡಿ ಕುಲಕರ್ಣಿ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಸಿಸಿಬಿ ಪಿಎಸ್ಐ ಯವರಾದ ನರೇಂದ್ರ, ಸುದೀಪ್ , ಎಎಸ್ಐ ಮೋಹನ್ ಕೆ ವಿ, ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿಯವರು ಭಾಗವಹಿಸಿದ್ದಾರೆ.

Related Articles

Latest Articles