ಜೋಧಪುರ: ‘ಗಡಿ ಭದ್ರತೆಗಾಗಿ ದೇಶದಲ್ಲಿ ಸಮಗ್ರ ಡ್ರೋನ್ ನಿಗ್ರಹ ಘಟಕ ಸ್ಥಾಪಿಸಲಾಗುವುದು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಮಾನವರಹಿತ ವೈಮಾನಿಕ ವಿಮಾನಗಳ ಬೆದರಿಕೆ ಹೆಚ್ಚಾಗುವ ಸಾಧ್ಯತೆಯಿದ್ದು, ಅವುಗಳನ್ನು ನಿಗ್ರಹಿಸಲು ಈ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಬಿಎಸ್‌ಎಫ್‌ನ 60ನೇ ಸ್ಥಾಪನಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ ಹಾಗೂ ಪಾಕಿಸ್ತಾನದ 300 ಕಿ.ಮೀ ಗಡಿಭಾಗದಲ್ಲಿ ಲೇಸರ್ ಹೊಂದಿದ ಡೋನ್ ನಿಗ್ರಹ ಬಂದೂಕಿನ ಬಳಕೆಯನ್ನು ಪ್ರೋತ್ಸಾಹಿಸಲಾಗುವುದು’ ಎಂದರು.
‘ಪಂಜಾಬ್‌ನ ಭಾರತ- ಪಾಕಿಸ್ತಾನ ಗಡಿಭಾಗದಲ್ಲಿ ಡೋನ್‌ಗಳನ್ನು ಪತ್ತೆಹಚ್ಚಿ ಹೊಡೆದುರುಳಿಸುವ ಪ್ರಮಾಣವು ಶೇ 3ರಿಂದ ಶೇ 55ರಷ್ಟಿದೆ. ಭವಿಷ್ಯದ ದಿನಗಳಲ್ಲಿ ಡೋನ್ ದಾಳಿಯ ಬೆದರಿಕೆ ಹೆಚ್ಚಾಗಲಿದ್ದು, ಇದನ್ನು ನಿಗ್ರಹಿಸಲು ಸರ್ಕಾರದ ಜೊತೆ ಕೈ ಜೋಡಿಸುವಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೂ(ಡಿಆರ್‌ಡಿಒ) ತಿಳಿಸಲಾಗಿದೆ’ ಎಂದರು.