ತಮಿಳು ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಗಾಯಕಿ ಸುಚಿತ್ರಾ ಹೇಳಿಕೆ ಕಾಲಿವುಡ್ ಅಂಗಳವನ್ನು ಬೆಚ್ಚಿಬೀಳಿಸಿದೆ. ತಾನೊಬ್ಬ ಸಲಿಂಗಕಾಮಿ ಎಂದು ಹೇಳಿಕೊಳ್ಳಲು ನನ್ನ ಗಂಡನಿಗೆ ಎದೆಗಾರಿಕೆ ಇಲ್ಲ ಎಂಬ ಮಾಜಿ ಪತ್ನಿ ಸುಚಿತ್ರಾ ಹೇಳಿಕೆಗೆ ನಟ ಕಾರ್ತಿಕ್ ಖಡಕ್ ಉತ್ತರ ನೀಡಿದ್ದಾರೆ.
ಹೌದು, ನಾನೊಬ್ಬ ಸಲಿಂಗಕಾಮಿ! ಈ ರೀತಿ ಹೇಳಿಕೊಳ್ಳಲು ನನಗೆ ಯಾವುದೇ ನಾಚಿಕೆ ಇಲ್ಲ ಎಂದಿದ್ದಾರೆ ನಟ ಕಾರ್ತಿಕ್.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಕಾರ್ತಿಕ್, ನಾನು ಸಲಿಂಗಕಾಮಿ ಆಗಿದ್ದರೆ, ನಾನು ಸಲಿಂಗಕಾಮಿ ಎಂದು ಹೇಳಿಕೊಳ್ಳಲು ನಾಚಿಕೆಪಡುವುದಿಲ್ಲ. ಅಸ್ತಿತ್ವದಲ್ಲಿರುವ ಯಾವುದೇ ರೀತಿಯ ಲೈಂಗಿಕತೆಯ ಬಗ್ಗೆ ನಾನು ತುಂಬಾ ಹೆಮ್ಮೆಪಡುತ್ತೇನೆ. ಯಾವುದೇ ಕಾರಣಕ್ಕೂ ನಾನು ನಾಚಿಕೆ ಪಡುವುದಿಲ್ಲ. ಲೈಂಗಿಕತೆಗೆ ಸಂಬಂಧಿಸಿದ ಯಾವುದೇ ರೀತಿಯ ರ್ಯಾಲಿ ನಡೆದರೆ ನಾನು ಹೆಮ್ಮೆಯಿಂದ ಭಾಗವಹಿಸುತ್ತೇನೆ. ಇಲ್ಲಿ ಅವಮಾನ ಅಂತಾ ಏನೂ ಇಲ್ಲ. ಕೇವಲ ಹೆಮ್ಮೆ ಇದೆ ಅಷ್ಟೇ ಎಂದು ಹೇಳುವ ಮೂಲಕ ತನ್ನ ಮಾಜಿ ಪತ್ನಿ ಸುಚಿತ್ರಾಗೆ ಕಾರ್ತಿಕ್ ತಿರುಗೇಟು ನೀಡಿದ್ದಾರೆ.
ಸುಚಿತ್ರಾ ಹೇಳಿದ್ದೇನು?
ನನ್ನ ಗಂಡ (ಕಾರ್ತಿಕ್) ಓರ್ವ ಸಲಿಂಗಕಾಮಿ. ಇದನ್ನು ಹೇಳಿಕೊಳ್ಳಲು ಆತನಿಗೆ ಧೈರ್ಯವಿಲ್ಲ. ನನ್ನ ಮದುವೆಯಾದ ಎರಡು ವರ್ಷಗಳ ಬಳಿಕ ನಾನದನ್ನು ತಿಳಿದುಕೊಂಡೆ. ನನ್ನ ಗಂಡನಿಗೂ ಮತ್ತು ಧನುಷ್ಗೂ ಸಂಬಂಧವಿದೆ. ದಿನವಿಡಿ ಕುಡಿದು ಇಬ್ಬರು ಒಂದೇ ರೂಮಿಗೆ ಹೋಗುತ್ತಾರೆ. ಆ ರೂಮಿನಲ್ಲಿ ಏನು ಮಾಡುತ್ತಾರೆ ಅಂತ ನನಗೆ ಮಾತ್ರ ತಿಳಿದಿದೆ. ಕಾರ್ತಿಕ್ ಮತ್ತು ನನ್ನದು, ನನ್ನ ತಂದೆ-ತಾಯಿ ನಿಶ್ಚಯಿಸಿದ ಮದುವೆ. ಹೀಗಾಗಿ ನಾನು ಅವನಿಂದ ಪ್ರೀತಿಯನ್ನು ನಿರೀಕ್ಷಿಸಿರಲಿಲ್ಲ. ಮೊದಲು ವಿಚ್ಛೇದನ ಕೇಳಿದ್ದು ನಾನೇ. ಇಬ್ಬರು ಡಿವೋರ್ಸ್ ಆಗಿದ್ದೇವೆ. ಸುಚಿ ಲೀಕ್ಸ್ ಪ್ರಕರಣದ ರುವಾರಿಯೇ ಅವರು ಎಂದು ಸುಚಿತ್ರಾ ಗಂಭೀರ ಆರೋಪ ಮಾಡಿದ್ದಾರೆ.
ತಮಿಳು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸುಚಿತ್ರಾ ಅವರು ಆಡಿರುವ ಮಾತುಗಳು ಮತ್ತೆ ವಿವಾದದ ಸ್ವರೂಪ ಪಡೆದುಕೊಂಡಿದೆ. ಮಾಜಿ ತಾರಾ ದಂಪತಿ ಧನುಷ್ ಮತ್ತು ಐಶ್ವರ್ಯಾ ರಜಿನಿಕಾಂತ್ ಒಬ್ಬರಿಗೊಬ್ಬರು ವಂಚನೆ ಮಾಡುತ್ತಿದ್ದರು. ಮನೆಯಿಂದ ಹೊರಗಡೆ ಇಬ್ಬರು ಬೇರೆಯವರೊಂದಿಗೆ ಸರಸವಾಡುತ್ತಿದ್ದರು ಎಂದು ಸುಚಿತ್ರಾ ಆರೋಪಿಸಿದ್ದಾರೆ. ಅಲ್ಲದೆ, ನಟ ಧನುಷ್ ಓರ್ವ ಸಲಿಂಗಕಾಮಿ ಮತ್ತು ಮಾದಕ ವ್ಯಸನಿ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಅಲ್ಲದೆ, ನನ್ನ ಮಾಜಿ ಗಂಡನು ಕೂಡ ಸಲಿಂಗಕಾಮಿ ಎಂದಿರುವ ಸುಚಿ, ಧನುಷ್ ಮತ್ತು ಕಾರ್ತಿಕ್ ಇಬ್ಬರು ಒಂದೇ ರೂಮಿನಲ್ಲಿದ್ದರು ಎಂದು ಆರೋಪ ಮಾಡಿದ್ದಾಳೆ.
ಮಾನಸಿಕ ಅಸ್ವಸ್ಥೆ
ಧನುಷ್ ಅವರ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡಿರುವ ಸುಚಿತ್ರಾ ಅವರ ವಿರುದ್ಧ ಧನುಷ್ ಅಭಿಮಾನಿಗಳು ಕಿಡಿಕಾರಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆ ಎಂದು ಜರಿಯುತ್ತಿದ್ದಾರೆ. ಸುಚಿತ್ರಾ ಮಾಜಿ ಪತಿ ಕಾರ್ತಿಕ್ ಕೂಡ ಇದನ್ನೇ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಆಕೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಆಕೆಯ ಮಾತುಗಳನ್ನು ಯಾರೂ ಕೂಡ ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.