Monday, December 9, 2024

ಎತ್ತಿನಹೊಳೆ ಯೋಜನೆ: ಮತ್ತೆ 500 ಎಕರೆ ಅರಣ್ಯಕ್ಕೆ ಬೀಳಲಿದೆ ಕೊಡಲಿ ಏಟು – ಕೇಂದ್ರಕ್ಕೆ ಪ್ರಸ್ತಾವನೆ

ಬಯಲುಸೀಮೆಯ ಜಿಲ್ಲೆಗಳಿಗೆ ನೀರು ಹಾಯಿಸುವ ಉದ್ದೇಶದಿಂದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಮತ್ತೆ 500 ಎಕರೆ (199 ಹೆಕ್ಟೇರ್) ಅರಣ್ಯ ಬಳಸಿಕೊಳ್ಳಲು ವಿಶ್ವೇಶ್ವರಯ್ಯ ಜಲ ನಿಗಮ ತೀರ್ಮಾನಿಸಿದೆ.

ಗುರುತ್ವಾಕರ್ಷಣೆ ಕಾಲುವೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹಾಸನ ಹಾಗೂ ತುಮಕೂರು ಜಿಲ್ಲೆಗಳ ಅರಣ್ಯ ಬಳಸಿಕೊಳ್ಳಲು ಅನುಮೋದನೆ ನೀಡುವಂತೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ನಿಗಮ ಪ್ರಸ್ತಾವನೆ ಸಲ್ಲಿಸಿದೆ.

ಯೋಜನೆಯ ಮೊದಲನೇ ಹಂತ ಎರಡು ತಿಂಗಳ ಹಿಂದೆಯಷ್ಟೇ ಸಾಕಾರಗೊಂಡಿತ್ತು. ಅದೇ ಸಮಯದಲ್ಲಿ, ಇಡೀ ಯೋಜನೆಯ ಕಾರ್ಯಸಾಧ್ಯತೆಯ ವರದಿ ಸಲ್ಲಿಸಬೇಕು ಎಂದು ಅರಣ್ಯ ಸಚಿವಾಲಯ ತಾಕೀತು ಮಾಡಿತ್ತು.

‘ಈ ಯೋಜನೆಗಾಗಿ 3 ಸಾವಿರ ಎಕರೆ ಜಾಗ ಬಳಸಿಕೊಳ್ಳಲಾಗುತ್ತಿದೆ. ಅದರಲ್ಲಿ ಅರಣ್ಯ ಪ್ರದೇಶದ ಪಾಲು ಶೇ 50ರಷ್ಟಿದೆ. ಈ ಅರಣ್ಯ ಬಳಕೆಗೆ ರಾಜ್ಯ ಸರ್ಕಾರ ಒಂದೇ ಹಂತದಲ್ಲಿ ಪ್ರಸ್ತಾವನೆ ಸಲ್ಲಿಸುತ್ತಿಲ್ಲ. ಪ್ರತ್ಯೇಕ ಪ್ರತ್ಯೇಕವಾಗಿ ಪ್ರಸ್ತಾವನೆ ಸಲ್ಲಿಸುತ್ತಿದೆ. ಇಂತಹ ಧೋರಣೆ ಸರಿಯಲ್ಲ’ ಎಂದು ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ, ನಿಗಮವು ಮತ್ತೊಂದು ಪ್ರಸ್ತಾವನೆ ಸಲ್ಲಿಸಿದೆ.

ಯೋಜನೆಗಾಗಿ ಹಾಸನ ಜಿಲ್ಲೆಯಲ್ಲಿ 819 ಹೆಕ್ಟೇರ್ ಅರಣೇತರ ಹಾಗೂ 159 ಹೆಕ್ಟೇರ್ ಅರಣ್ಯ, ತುಮಕೂರು ಜಿಲ್ಲೆಯಲ್ಲಿ 1,215 ಹೆಕ್ಟೇ‌ರ್ ಅರಣೇತರ ಹಾಗೂ 33 ಹೆಕ್ಟೇರ್ ಅರಣ್ಯ ಭೂಮಿ ಬಳಸಿಕೊಳ್ಳಲಾಗುತ್ತದೆ.

ಅರಣ್ಯ ಇಲಾಖೆಯು ಪರಿಹಾರಾತ್ಮಕ ಅರಣೀಕರಣದ ಯೋಜನೆಯನ್ನು ಸಲ್ಲಿಸಿಲ್ಲ ಎಂದು ಸಚಿವಾಲಯವು ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿತ್ತು. ಪರಿಹಾರಾತ್ಮಕ ಅರಣೀಕರಣಕ್ಕೆ 159 ಹೆಕ್ಟೇರ್ ಗುರುತಿಸಲಾಗಿದೆ ಎಂದು ನಿಗಮವು ಪ್ರಸ್ತಾವನೆಯಲ್ಲಿ ತಿಳಿಸಿದೆ.

Related Articles

Latest Articles