Sunday, March 23, 2025

ಭ್ರೂಣಲಿಂಗ ಪತ್ತೆ, ಹತ್ಯೆ ಪ್ರಕರಣದಲ್ಲಿ ಶಾಮಿಲಾಗಿದ್ದ ನರ್ಸ್​​ ಬಂಧನ – ಪ್ರಕರಣ ಬೆಳಕಿಗೆ ಬಂದಾಗ ಐನಾತಿ ಮಾಡಿದ್ದೇನು ಗೊತ್ತಾ.?

ಬೆಂಗಳೂರು ಸೇರಿ ಮೂರು ಜಿಲ್ಲೆಗಳಲ್ಲಿ ನಡೆದಿದ್ದ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣ ರಾಜ್ಯ ಮಾತ್ರವಲ್ಲದೆ ದೇಶವನ್ನು ಬೆಚ್ಚಿ‌ ಬೀಳಿಸಿದೆ. ಇದೀಗ ಪ್ರಕರಣ ಸಂಬಂಧ ಬೈಯ್ಯಪ್ಪಹಳ್ಳಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ನರ್ಸ್ ಉಷಾರಾಣಿ ಬಂಧಿತ ಆರೋಪಿ. ಈ ಮೂಲಕ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಬಂಧಿತ ಉಷಾರಾಣಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಡಾ.ಚಂದನ್ ಬಲ್ಲಾಳ್​ನ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಳು. ಪ್ರಕರಣ ಬೆಳಕಿಗೆ ಬಂದ ಬಳಿಕ ನರ್ಸ್​ ಉಷಾರಾಣಿ ಕೆಲಸ ಬಿಟ್ಟಿದ್ದಳು. ಬಳಿಕ ಮೈಸೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕೆಲಸಕ್ಕೆ ಸೇರಿದ್ದಳು.

ನರ್ಸ್​ ಉಷಾರಾಣಿ ಪ್ರಕರಣದ ಮತ್ತೊಬ್ಬ ಆರೋಪಿ ಬ್ರೋಕರ್ ಪುಟ್ಟರಾಜು ಸಂಬಂಧಿ ಆಗಿದ್ದಾಳೆ. ಬ್ರೋಕರ್ ಪುಟ್ಟರಾಜು ಅಣತಿ ಮೇರೆಗೆ ಉಷಾರಾಣಿ ಗರ್ಭಪಾತ ಮಾಡುತ್ತಿದ್ದಳು. ಗರ್ಭಪಾತಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಳು. ಬೈಯ್ಯಪ್ಪಹಳ್ಳಿ ಪೊಲೀಸರು ಬ್ರೋಕರ್​ ಪುಟ್ಟರಾಜು ಅನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಎಲ್ಲ ವಿಚಾರಗಳು ಬಯಲಾಗಿವೆ. ಸದ್ಯ ಬ್ರೋಕರ್​​ ಪುಟ್ಟರಾಜು ಜಾಮೀನು ಪಡೆದಿದ್ದು, ಸಂಬಂಧಿ ಉಷಾರಾಣಿಯನ್ನು ಬಂಧಿಸಲಾಗಿದೆ.

ಇನ್ನು ಉಷಾರಾಣಿ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆ ಲಿಂಗ ಪತ್ತೆ ಮಾಡದೇ ಆರೋಗ್ಯ ಇಲಾಖೆ ನಿಯಮಾವಳಿ ಪ್ರಕಾರ ಅಬಾಷನ್​ ಮಾಡುತಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆ ಮಾಲೀಕರನ್ನು ಬೈಯಪ್ಪನಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಉಷಾರಾಣಿ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆ ಈ ನಿಯಮಗಳನ್ನು ಹೊಂದಿದೆ. ಇದನ್ನು ತಿಳಿದ ಉಷಾರಾಣಿ ಆಸ್ಪತ್ರೆಯ ಮಾಲೀಕ ಮತ್ತು ವೈದ್ಯರ ಗಮನಕ್ಕೂ ಬಾರದ ರೀತಿ, ನಕಲಿ ದಾಖಲೆ ಸೃಷ್ಟಿಸಿ ಅಬಾಷನ್​​ ಮಾಡುತ್ತಿದ್ದಳು. ಬಳಿಕ ವೈದ್ಯರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಳು.

ಈ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ಪೊಲೀಸರು ಉಷಾರಾಣಿಯನ್ನು ಬಂಧಿಸಿದ್ದಾರೆ ಉಷಾರಾಣಿಗೆ ಈ ಜಾಲದ ನಂಟು ಸಿಕ್ಕಿದ್ದು ಹೇಗೆ..? ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಉಷಾರಾಣಿ ನಕಲಿ ದಾಖಲೆ ಸೃಷ್ಟಿಸಿದ್ದು ಹೇಗೆ..? ಎಂಬ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೂಲ ವರದಿ: ಟಿವಿ 9 ಕನ್ನಡ

Related Articles

Latest Articles