ಕಾಸರಗೋಡು: ಡಿವೈಎಫ್ಐ ಮುಖಂಡೆಯೊಬ್ಬಳು ಕೇಂದ್ರ ಸರಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ. ನೌಕರಿ ಕೊಡಿಸುವುದಾಗಿ ಹೇಳಿ ವಂಚಿಸಿದ ಆರೋಪದ ಮೇಲೆ ಡಿವೈಎಫ್‌ಐ ಮುಖಂಡೆ, ಶಾಲಾ ಶಿಕ್ಷಕಿಯ ಮೇಲೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತದ ವಿರುದ್ದ ಸದಾ ಟೀಕೆ, ವ್ಯಂಗ್ಯವಾಡುತ್ತಿದ್ದ ಸಚಿತಾ ರೈ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.
ಕೇಂದ್ರ ಸಚಿವಾಲಯದ ಅಧೀನದಲ್ಲಿರುವ ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ (ಸಿಪಿಸಿಆರ್‌ಐ) ಹುದ್ದೆಯ ಭರವಸೆ ನೀಡಿ ಯುವತಿಗೆ 15 ಲಕ್ಷ ರೂಪಾಯಿ ವಂಚಿಸಿದ್ದಾರೆ.
ಐಪಿಸಿಯ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ರೈ ವಿರುದ್ಧ ಪ್ರಕರಣ ದಾಖಲಿಸಿರುವ ಕುಂಬಳೆ ಪೊಲೀಸರು, ಆಕೆ ಅನೇಕ ಉದ್ಯೋಗಾಕಾಂಕ್ಷಿಗಳಿಂದ ಸುಮಾರು 2 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದಾಳೆ ಎಂಬ ಸ್ಪೋಟಕ ಅಂಶ ಮುನ್ನಲೆಗೆ ಬಂದಿದೆ.
ಕಾಸರಗೋಡಿನ ಕಿದೂರಿನ ನಿಶ್ಮಿತಾ ಶೆಟ್ಟಿ (24) ಎಂಬುವರ ದೂರಿನ ಆಧಾರದ ಮೇಲೆ ಕುಂಬಳ ಪೊಲೀಸರು ಸಚಿತಾ ರೈ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವರು ಮೇ 31 ಮತ್ತು ಆಗಸ್ಟ್ 23, 2023 ರ ನಡುವೆ ಹಲವಾರು ಹಂತಗಳಲ್ಲಿ ಬ್ಯಾಂಕ್ ಮತ್ತು GPay ಮೂಲಕ 15,05,796 ರೂ.ಗಳನ್ನು ರೈಗೆ ವರ್ಗಾಯಿಸಿದ್ದಾರೆ.
“ನಾನು ಸಚಿತಾ ಅವರ ಬಗ್ಗೆ ಇನ್ನೊಬ್ಬ ಉದ್ಯೋಗಾಕಾಂಕ್ಷಿ ಮೂಲಕ ತಿಳಿದುಕೊಂಡಿದ್ದೇನೆ. ಸಚಿತಾ ಅವರು ನನಗೆ CPCRI ನಲ್ಲಿ ಕೆಲಸ ಮಾಡಲು ಸಹಾಯ ಮಾಡಬಹುದೆಂದು ಹೇಳಿದ್ದರು. ಸಚಿತಾ ತುಂಬಾ ಶ್ರೀಮಂತ ಆದರೆ ನಾನು ನನ್ನ ಪತಿಯಿಂದ ಸಾಲ ಮಾಡಿ ನನ್ನ ಆಭರಣಗಳನ್ನು ಗಿರವಿ ಇಟ್ಟು ಹಣವನ್ನು ಸಂಗ್ರಹಿಸಿದ್ದೇನೆ. ಶಿಕ್ಷಕಿಯಾಗಿದ್ದುಕೊಂಡು ನನಗೆ ಮೋಸ ಮಾಡುತ್ತಾಳೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ” ಎಂದು ಅವರು ಕೇರಳದ ಸುದ್ದಿ ವಾಹಿನಿ ಒನ್ ಮನೋರಮಾಗೆ ತಿಳಿಸಿದರು.
ಹಲವು ಬಾರಿ ಮನವಿ ಮಾಡಿದರೂ ಹಣವನ್ನು ಹಿಂದಿರುಗಿಸಲು ಸಚಿತ ರೈ ವಿಫಲರಾದ ಹಿನ್ನೆಲೆಯಲ್ಲಿ ತಾನು ಕುಂಬಳ ಪೊಲೀಸರನ್ನು ಸಂಪರ್ಕಿಸಿರುವುದಾಗಿ ನಿಶ್ಮಿತಾ ಶೆಟ್ಟಿ ತಿಳಿಸಿದ್ದಾರೆ.

ನಿಶ್ಮಿತಾ ಶೆಟ್ಟಿ ಪ್ರಕಾರ, ಸಚಿತಾ ರೈ ಕೇರಳದ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಬೋಧಕ ಹುದ್ದೆಯ ಭರವಸೆ ನೀಡಿ ಇನ್ನೊಬ್ಬ ವ್ಯಕ್ತಿಯನ್ನು ವಂಚಿಸಿದ್ದಾರೆ. ರೈ ವಿರುದ್ಧ ಹೆಚ್ಚಿನ ದೂರುಗಳು ದಾಖಲಾಗುವ ನಿರೀಕ್ಷೆಯಿದೆ ಎಂದು ಕುಂಬಳ ಪೊಲೀಸರು ತಿಳಿಸಿದ್ದಾರೆ.
ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಣಿ ಮೂಲದ ಸಚಿತಾ ರೈ ಸಿಪಿಎಂ ಕುಟುಂಬದಿಂದ ಬಂದವರು. ಆಕೆಯ ತಂದೆ ಪಕ್ಷದ ಕಾರ್ಯಕ್ರಮಗಳಿಗೆ ಬೇಡಿಕೆಯಿರುವ ವಾಗ್ಮಿ. ಅಂಗಡಿಮೊಗರು ಸರ್ಕಾರಿ ಎಚ್‌ಎಸ್‌ಎಸ್‌ನಲ್ಲಿ ತಾತ್ಕಾಲಿಕ ಶಿಕ್ಷಕಿಯಾಗಿದ್ದರು. ನಂತರ ಅವಳು ಪುತ್ತಿಗೆ ಗ್ರಾಮ ಪಂಚಾಯತ್‌ನ ಬಾದೂರಿನ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಯಮಿತ ಬೋಧನಾ ಕೆಲಸಕ್ಕೆ ಸೇರಿಕೊಂಡಳು. ಎರಡು ತಿಂಗಳ ಹಿಂದೆ ಹೆರಿಗೆಯಾಗಿದ್ದು, ಹೆರಿಗೆ ರಜೆಯಲ್ಲಿದ್ದಾರೆ. ಇಲ್ಲದಿದ್ದರೆ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ ಎಂದು ಬಾದೂರು ವಾರ್ಡ್‌ನ ಪುತ್ತಿಗೆ ಪಂಚಾಯಿತಿ ಸದಸ್ಯೆ ಅನಿತಾ ಎಂ. ಹೇಳಿದ್ದಾರೆ.
ಸಚಿತಾ ರೈ ಇನ್ನೂ ಹಲವಾರು ಮಂದಿಗೆ ವಂಚಿಸಿರುವ ಆರೋಪವಿದೆ. ಇನ್ನು ಈ ಆರೋಪ ಕೇಳಿಬರುತ್ತಿದ್ದಂತೆ, ಡಿವೈಎಫ್‌ಐ ಪಕ್ಷದಿಂದ ಉಚ್ಛಾಟನೆ ಮಾಡಿದೆ ಎಂದು ಹೇಳಿಕೊಂಡು ಕೈತೊಳೆಯುವ ಕಾರ್ಯ ಮಾಡಿದೆ.