Wednesday, December 11, 2024

ದಕ್ಷಿಣ ಕನ್ನಡ: ಸೌಜನ್ಯಾ ಅತ್ಯಾಚಾರ – ಕೊಲೆ ಪ್ರಕರಣ; ಅಂದು ಪೋಸ್ಟ್‌ ಮಾರ್ಟಂ ಮಾಡಿದ್ದ ವೈದ್ಯ ಡಾ. ಆದಂ ವಿಧಿವಶ

ದಕ್ಷಿಣ ಕನ್ನಡ: ಕು. ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಕು. ಸೌಜನ್ಯಾಳ ಪೋಸ್ಟ್ ಮಾರ್ಟಂ ಮಾಡಿದ್ದ ವೈದ್ಯರು ಅಸುನೀಗಿದ್ದಾರೆ.

ಈ ಹಿಂದೆ ಪುತ್ತೂರು ಮತ್ತು ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಬಳಿಕ ಬೆಳ್ತಂಗಡಿ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 14 ವರ್ಷ ಕರ್ತವ್ಯ ಸಲ್ಲಿಸಿ ಕಳೆದ ವರ್ಷ ನಿವೃತ್ತರಾಗಿದ್ದ, ಮಂಗಳೂರು ತಲಪಾಡಿ ಕೆ.ಸಿ. ರೋಡ್ ನಿವಾಸಿ ಡಾ.ಆದಂ ಉಸ್ಮಾನ್ (61) ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 5.30ಕ್ಕೆ ಅವರ ಸ್ವಂತ ಊರಾದ ಕಡಬದಲ್ಲಿ ನಡೆಯಲಿದೆ. ಹಾಗೂ ಕಡಬ ಕೇಂದ್ರ ಜುಮಾ ಮಸೀದಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಧರ್ಮಸ್ಥಳದ ಸೌಜನ್ಯ ಹತ್ಯಾ ಪ್ರಕರಣದ ಸಮಯದಲ್ಲಿ ಬೆಳ್ತಂಗಡಿ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ಆದಂ ಮತ್ತು ಡಾ. ರಶ್ಮಿ ಅವರ ಮೇಲೆ ಪೋಸ್ಟ್ ಮಾರ್ಟಂ ರಿಪೋರ್ಟ್ ಅನ್ನು ತಿರುಚಿದ ಆರೋಪ ಕೇಳಿ ಬಂದಿತ್ತು. ಸರಿಯಾಗಿ ಬೆಳಕಿಲ್ಲದೆ ಕತ್ತಲಲ್ಲಿ ಪೋಸ್ಟ್ ಮಾರ್ಟಂ ಮಾಡಿದ್ದಾರೆ ಮತ್ತು ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ನೆರವಾಗಿದ್ದಾರೆ ಎನ್ನುವ ಗಂಭೀರ ಆರೋಪ ಇಂದಿಗೂ ಇದೆ. ಡಾ. ಆದಂ ಅವರ ಅಕಾಲಿಕ ಮರಣವು ಸೌಜನ್ಯಾಳ ಶಾಪ ಎಂದು ಸೌಜನ್ಯ ಪರ ಹೋರಾಟಗಾರರ ತಂಡಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

Related Articles

Latest Articles