Sunday, October 13, 2024

ಕಬ್ಬಿನ ಗದ್ದೆಯಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋದ ತಾಯಿ: ಸ್ಥಳೀಯರಿಂದ ರಕ್ಷಣೆ

ಕಬ್ಬಿನ ಗದ್ದೆಯಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ ಆ ಮಗುವನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ. ಆದರೆ ಹೃದಯವಂತರೂ ಇದ್ಧಾರೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಗ್ರಾಮದ ಕೆಲವರು ಮಗುವನ್ನು ರಕ್ಷಿಸಿ ಇನ್ನೊಬ್ಬ ತಾಯಿ ಆರೈಕೆ ಮಾಡುತ್ತಿದ್ದಾಳೆ.

ಈ ಘಟನೆ ನಡೆದಿರುವುದು ಧಾರವಾಡ ಜಿಲ್ಲೆ ಕಲಘಟಗಿ ನಗರದ ಹೊರ ವಲಯದಲ್ಲಿ. ಈಗಾಗಲೇ ಕಲಘಟಗಿ ಪೊಲೀಸರು ಈ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದು, ತಾಯಿ ಪತ್ತೆಗೆ ಕ್ರಮ ವಹಿಸಿದ್ದಾರೆ.

ದಾರವಾಢ ಜಿಲ್ಲೆಯ ಕಲಘಟಗಿ ಪಟ್ಟಣದ ಹೊರ ವಲಯದ ಕೆಇಬಿ ಗ್ರೀಡ್ ಬಳಿಯ ಕಬ್ಬಿನ ಗದ್ದೆಯೊಂದರಲ್ಲಿ ಮಂಗಳವಾರ ಮಧ್ಯಾಹ್ನ ನವಜಾತ ಶಿಶು ಪತ್ತೆಯಾಗಿದೆ. ಅಂದಾಜು ಮೂರು ಕೆ.ಜಿ ತೂಕದ ಗಂಡು ಶಿಶುವಿದು. ಶಿಶುವಿಗೆ ಇರುವೆಗಳು ಕಚ್ಚಲು ಆರಂಭಿಸಿದಾಗ ಮಗು ಅಳಲು ಆರಂಭಿಸಿದೆ. ಶಿಶುವಿನ ಧ್ವನಿ ಕೇಳಿಸಿಕೊಂಡ ಕಬ್ಬಿನ ಗದ್ದೆಯ ಪಕ್ಕದ ಮನೆಯವರು ಶಿಶು ರಕ್ಷಿಸಿ ಆರೈಕೆ ನೀಡಿದ್ದಾರೆ.

ಅಂದಾಜು 2 ಗಂಟೆ ಸುಮಾರಿಗೆ ಅಪರಿಚಿತ ತುಂಬು ಗರ್ಭಿಣಿಯೊಬ್ಬಳು ಪಟ್ಟಣದ ಕಬ್ಬಿನ ಗದ್ದೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಶಿಶುವಿಗೆ ಜನ್ಮ ನೀಡಿದ ಸ್ಥಳ ರಕ್ತಸಿಕ್ತವಾಗಿದೆ. ಬಳಿಕ ಕರಳು ಬಳ್ಳಿ ಕತ್ತರಿಸಿಕೊಂಡು ಮಗುವನ್ನು ಗದ್ದೆಯಲ್ಲೇ ಬಿಟ್ಟು ತಾಯಿ ಅಲ್ಲಿಂದ ಪರಾರಿಯಾಗಿದ್ದಾಳೆ ಎನ್ನುವುದು ಅಲ್ಲಿನ ಘಟನಾವಳಿಗಳನ್ನು ನೋಡಿದಾಗ ಕಂಡು ಬಂದಿದೆ.

ವಿಷಯ ತಿಳಿದ ಸಿಪಿಐ ಶ್ರೀಶೈಲ ಕೌಜಲಗಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮಗುವಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಸಿದ್ದಾರೆ. ಬಳಿಕ ಜಿಲ್ಲಾ ಶಿಶುಪಾಲನಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles