ಧಾರವಾಡ: ಐಟಿ ಅಧಿಕಾರಿಗಳು ದಾಳಿ ಮಾಡಿ ಮನೆಯಲ್ಲಿದ್ದ ಬರೋಬ್ಬರಿ 18 ಕೋಟಿ ರೂಪಾಯಿ ಹಣವನ್ನು ಪತ್ತೆ ಮಾಡಿದ್ದಾರೆ. ಐಟಿ ದಾಳಿ ಹಿನ್ನೆಲೆ ಘಟನಾ ಸ್ಥಳಕ್ಕೆ ಎಸಿಪಿ ಬಸವರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಧಾರವಾಡ ನಗರದ ದಾಸನಕೊಪ್ಪ ಅರ್ನಾ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಯಾಗಿರುವ ಬಸವರಾಜ್ ಅವರ ಮನೆಗೆ ದಾಳಿ ಮಾಡಿದಾಗ ಅಧಿಕಾರಿಗಳು ಶಾಕ್ ಆಗಿದ್ದಾರೆ. ಇಂದು 10 ವಾಹನಗಳಲ್ಲಿ 20ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಬಸವರಾಜ ದತ್ತಣ್ಣವರ ನಿವಾಸದಲ್ಲಿ 18 ಕೋಟಿ ಹಣದ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.
ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಇಷ್ಟೊಂದು ದೊಡ್ಡ ಮೊತ್ತ ಹಣ ಸಿಕ್ಕಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ. ಬಸವರಾಜ ದತ್ತಣ್ಣ ಎಂಬುವರ ನಿವಾಸದಲ್ಲಿ ಐಟಿ ಅಧಿಕಾರಿಗಳ ಪರಿಶೀಲನೆ ಮುಂದುವರಿದಿದೆ.
ಈ ಮನೆಯಲ್ಲಿ ಲಿಕ್ಕರ್ ಇದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳ ದಾಳಿ ನಡೆಸಿದ್ದರು. ಮನೆಯನ್ನು ಪರಿಶೀಲನೆ ನಡೆಸುವಾಗ ಕಂತೆ, ಕಂತೆ ಹಣ ಪತ್ತೆಯಾಗಿದೆ. ಐಟಿ ದಾಳಿ ವೇಳೆ ಅಪಾರ ಪ್ರಮಾಣದ ಹಣ ಪತ್ತೆಯಾಗಿದ್ದು, ಇನ್ನೂ ಶೋಧ ಕಾರ್ಯ ಮುಂದುವರೆದಿದೆ. ಇಡೀ ಅಪಾರ್ಟ್‌ಮೆಂಟ್ ಬಾಡಿಗೆ ಪಡೆದು ಹಣ ಸಂಗ್ರಹಿಸಿದ ಮಾಹಿತಿ ಲಭ್ಯವಾಗಿದೆ.