2023ರಲ್ಲಿ ರಕ್ಷಣಾ ವೆಚ್ಚದಲ್ಲಿ ವಿಶ್ವದಲ್ಲೇ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಭಾರತ 6.96 ಲಕ್ಷ ಕೋಟಿ ರೂ.ಗಳನ್ನು ರಕ್ಷಣಾ ಕ್ಷೇತ್ರಕ್ಕೆ ವೆಚ್ಚ ಮಾಡಿದ್ದಾಗಿ ವರದಿ ಬಹಿರಂಗ ಪಡಿಸಿದೆ.
ರಕ್ಷಣಾ ವೆಚ್ಚದಲ್ಲಿ ವಿಶ್ವದ ಟಾಪ್ ಮೂರರ ಪಟ್ಟಿಯಲ್ಲಿ ಕ್ರಮವಾಗಿ ಅಮೆರಿಕ, ಚೀನಾ ಮತ್ತು ರಷ್ಯಾ ಇದೆ ಎಂದು ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ(ಎಸ್‌ಐಪಿಆರ್‌ಐ) ವರದಿ ಮಾಡಿದೆ.
ರಷ್ಯಾ-ಉಕ್ರೇನ್ ಯುದ್ಧ ಹಾಗೂ ಏಷ್ಯಾ ಮತ್ತು ಮಧ್ಯ ಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಕಾರಣ ಕಳೆದ ವರ್ಷ ಜಾಗತಿಕವಾಗಿ ರಕ್ಷಣಾ ವೆಚ್ಚದಲ್ಲಿ ಏರಿಕೆಯಾಗಿದೆ. ಯೂರೋಪ್, ಏಷ್ಯಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ರಕ್ಷಣಾ ವೆಚ್ಚದಲ್ಲಿ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಹೇಳಿದೆ.
ಜಾಗತಿಕ ರಕ್ಷಣಾ ವೆಚ್ಚವು ಸತತ 9 ವರ್ಷಗಳಿಂದ ಏರಿಕೆಯಾಗಿದೆ. ರಕ್ಷಣೆಗಾಗಿ 2023ರಲ್ಲಿ ವಿಶ್ವದಲ್ಲಿ ಒಟ್ಟಾರೆ 2443 ಬಿಲಿಯನ್ ಡಾಲರ್ ವೆಚ್ಚ ಮಾಡಲಾಗಿದೆ. 2022ಕ್ಕೆ ಹೋಲಿಸಿದರೆ 2023ರಲ್ಲಿ ರಕ್ಷಣಾ ವೆಚ್ಚದಲ್ಲಿ ಶೇ.6.8ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.