ಮೈಸೂರು ದಸರಾದಲ್ಲಿ 8 ವರ್ಷ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಮತ್ತೊಂದು ದಸರಾ ಆನೆ ಮೃತಪಟ್ಟಿದೆ. ವಿದ್ಯುತ್ ತಂತಿ ತುಳಿದು ಅಶ್ವತ್ಥಾಮ ದುರಂತ ಅಂತ್ಯಕಂಡಿದ್ದಾನೆ. ನಾಗರಹೊಳೆ ಅರಣ್ಯ ಪ್ರದೇಶದ ಗಡಿಯಲ್ಲಿ ಹಾಕಲಾಗಿರುವ ಸೋಲಾರ್ ತಂತಿ ಬೇಲಿಯಲ್ಲಿ ವಿದ್ಯುತ್ ಪ್ರವಹಿಸಿ ಸಾವನಪ್ಪಿದ ಅಶ್ವತ್ಥಾಮ ಸಾವನ್ನಪ್ಪಿದ್ದಾನೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಹುಣಸೂರು ಪಿರಿಯಾಪಟ್ಟಣ ಗಡಿ ಭಾಗದಲ್ಲಿರುವ ಆನೆ ಶಿಬಿರದಲ್ಲಿದ್ದ 38 ವರ್ಷದ ಅಶ್ವತ್ಥಾಮ ಆನೆ, ಎರಡು ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿತ್ತು. 2017ರಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಅಶ್ವತ್ಥಾಮ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಬಳಿಕ ಅದನ್ನು ಪಳಗಿಸಿ ಮೈಸೂರು ದಸರಾ ಮಹೋತ್ಸವಕ್ಕೆ ಕರೆತರಲಾಗಿತ್ತು. ಶಾಂತ ಹಾಗೂ ಗಾಂಭಿರ್ಯಕ್ಕೆ ಅಶ್ವತ್ಥಾಮ ಆನೆ ಹೆಸರುವಾಸಿಯಾಗಿತ್ತು.
ದಸರಾ ಗಜಪಡೆಯ ಆನೆಗಳು ಮೃತ್ಯು
ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ..!
ಹಾಸನ ಜಿಲ್ಲೆಯ ಸಕಲೇಶಪುರದ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಒಂಟಿ ಸಲಗದ ಜತೆ ಕಾಳಗಕ್ಕಿಳಿದು ದಾರುಣ ಸಾವು ಕಂಡಿದೆ. ಇತರ ಮೂರು ಸಾಕಾನೆಗಳೊಂದಿಗೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅರ್ಜುನನ ಮೇಲೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿತ್ತು. ಇತರ ಮೂರು ಸಾಕಾನೆಗಳು ಮತ್ತು ಮಾವುತರು ಅಲ್ಲಿಂದ ಓಡಿ ದಾಳಿಯಿಂದ ತಪ್ಪಿಸಿಕೊಂಡರು. ಆದರೆ 64 ವರ್ಷದ ಅರ್ಜುನ ದಿಟ್ಟತನದಿಂದ ಅದನ್ನು ಎದುರಿಸುವ ಸಾಹಸಕ್ಕಿಳಿಯಿತು. ಈ ಕಾದಾಟದಲ್ಲಿ ಹೊಟ್ಟೆ ಭಾಗಕ್ಕೆ ಕಾಡಾನೆ ತಿವಿದ ಪರಿಣಾಮ ಗಂಭೀರ ಗಾಯಗೊಂಡ ಅರ್ಜುನ ಡಿ.4 2023ರಂದು ಕೊನೆ ಉಸಿರೆಳೆದಿದೆ.
14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ..!
ಮೈಸೂರು ದಸರಾದಲ್ಲಿ ಸುಮಾರು 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮನ ರಾಜಗಾಂಭೀರ್ಯವೇ ಬೇರೆ. 2.70ಮೀಟರ್ ಎತ್ತರ, 3.77ಮೀ. ಉದ್ದವಿದ್ದ ಬಲರಾಮ ಅತ್ಯಂತ ಬಲಶಾಲಿಯಾಗಿದ್ದ. ಪುಂಡಾನೆಗಳನ್ನು ಸೆರೆಹಿಡಿಯಲು ಮತ್ತು ಪಳಗಿಸುವ ಕಾರ್ಯಾಚರಣೆಯಲ್ಲಿ ಈತನೇ ಮುಂದಿದ್ದ. 67 ವರ್ಷ ಪ್ರಾಯವಾಗಿದ್ದ ಬಲರಾಮ ಸದಾ ಸಾಧು ಸ್ವಭಾವದದಿಂದ ಎಲ್ಲರಿಗೂ ಪ್ರಿಯನಾಗಿದ್ದನು. ವಯಸ್ಸಾದ ಕಾರಣ ಹುಣಸೂರು ತಾಲೂಕಿಗೆ ಒಳಪಡುವ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಾಲನೆಯಲ್ಲಿದ್ದ ಬಲರಾಮ 7 ಮೇ 2023ರಂದು ಇಹಲೋಕ ತ್ಯಜಿಸಿದ್ದಾನೆ.
ಅತ್ಯಂತ ಸ್ಫುರದ್ರೂಪಿ ಗೋಪಾಲಸ್ವಾಮಿ
ನಾಡಹಬ್ಬ ದಸರಾ ಗಜಪಡೆಯ ಆಕರ್ಷಣೀಯ ಕೇಂದ್ರಬಿಂದುಗಳಲ್ಲಿ ಒಂದಾದ, ಅತ್ಯಂತ ಸ್ಫುರದ್ರೂಪಿ, ಆಕರ್ಷಕ ಗೋಪಾಲಸ್ವಾಮಿ ಆನೆ ಕಾಡಾನೆ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಹೋಬಳಿ ಬಳಿ ಕಾಡಾನೆ ದಾಳಿಯಿಂದ ತೀವ್ರ ಗಾಯಗೊಂಡು ಗೋಪಾಲಸ್ವಾಮಿ ಆನೆ ನ. 13, 2022ರಂದು ಸಾವನಪ್ಪಿದೆ.