Wednesday, December 11, 2024

ದಸರಾ ಹಬ್ಬದ ಮಹತ್ವವನ್ನು ವರ್ಣಿಸಲು ಪದಗಳೇ ಸಾಲದು…!

ದಸರಾ ಹಬ್ಬದ ಮಹತ್ವವನ್ನು ವರ್ಣಿಸಲು ಪದಗಳೇ ಸಾಲದು. ದುಷ್ಟ ರಕ್ಕಸರನ್ನು ವಧಿಸಲು ಆದಿಮಾಯೆ ನವ ರೂಪಗಳಲ್ಲಿ, ನವ ಅವತಾರಗಳನ್ನು ತಾಳಿ ವಿಜಯದಶಮಿಯಂದು ವಿಜಯದ ಮಾಲೆಯನ್ನು ಧರಿಸಿಕೊಳ್ಳುತ್ತಾಳೆ. ಅದರ ಪ್ರತೀಕವೇ ಇಂದು ದಸರಾ ಹಬ್ಬವನ್ನು ಆಚರಿಸುತ್ತಿರುವುದು. ಇದು ನಮ್ಮ ನಾಡ ಹಬ್ಬವೆಂದು ಹೇಳಲು ತುಂಬಾ ಹೆಮ್ಮೆಯಾಗುತ್ತದೆ.
ಇದು ನಮ್ಮ ಸಂಸ್ಕೃತಿಯನ್ನು ಉಳಿಸುವ, ಬೆಳೆಸುವ ಹಬ್ಬವಾಗಿದೆ. ತಾಯಿ ಮಾತೃ ಸ್ವರೂಪಿಣಿ, ಶಕ್ತಿ ಸ್ವರೂಪಿಣಿ, ದುಷ್ಟ ಸಂಹಾರಿಣಿಯೂ ಹೌದು.

ನವ ದುರ್ಗೆಯರು ನವ ರೂಪಗಳಲ್ಲಿ ಅಲಂಕಾರಗೊಂಡು ಆರಾಧನೆಗೊಳ್ಳುವುದನ್ನು ನೋಡುವ ಸೌಭಾಗ್ಯವೇ ಚಂದ. ತಾಯಿಯ ಆರಾಧನೆಯ ಜೊತೆಗೆ ‌’ಆಯುಧ ಪೂಜೆಯ’ ಸಂಭ್ರಮ ‌ಇನ್ನೂ ಜೋರು. ಕೃಷಿ ಮಾಡುವ ರೈತರ ಸಲಕರಣೆಗಳಿಂದ ಹಿಡಿದು ಬದುಕು ಕಟ್ಟಿ ಕೊಡುವ ಯಾವುದೇ ಆಯುಧಗಳಿಗೂ , ಜೊತೆಗೆ ಓಡಾಡುವ ವಾಹನಗಳಿಗೂ ಪೂಜೆ ಮಾಡುವ ಸಂಪ್ರದಾಯ ಇಂದಿಗೂ ಇದೆ. “ಅಕ್ಷರಾಭ್ಯಾಸ” ಇದು ವಿಜಯ ದಶಮಿ ದಿನದಂದು ಮಾಡುವ ಇನ್ನೊಂದು ವಿಶೇಷ. ವಿದ್ಯಾ ಸರಸ್ವತಿಯಾಗಿರುವ ಶಾರದೆಯ ಸಮ್ಮುಖದಲ್ಲಿ ಕುಳಿತು ಅಕ್ಷರ ಜ್ಞಾನವನ್ನು‌ ಆರಂಭ ಮಾಡುವುದು ವಿದ್ಯೆಗೆ ಮುನ್ನುಡಿ.

ದಸರಾ ಅಂದಾಕ್ಷಣ ನೆನಪಾಗುವುದು ನವರಾತ್ರಿಯಲ್ಲಿ ಬರುವ ವೇಷಗಳು‌. ಇದು ತುಳುನಾಡಿನ ಜನತೆಗೆ ಮನೋರಂಜನೆಯ ಹಬ್ಬವಾಗಿದೆ. ವೇಷಧಾರಿಗಳು ಕಿಂಚಿತ್ ಸಂಭಾವನೆ ಪಡೆಯುವಾಗ ಅದರಿಂದ ಸಿಗುವ ಖುಷಿಯೇ‌ ಬೇರೆ. ಸಿಂಹ ವೇಷ, ಕರಡಿ ವೇಷ ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಹೊಸತನದ ಪ್ರಯೋಗ ಮಾಡುವ ವೇಷಗಳು ಕಾಣಸಿಗುವುದು ಇನ್ನೂ ವಿಶೇಷ. ಅದರಲ್ಲೂ ಹುಲಿ ವೇಷಕ್ಕಿರುವ ಗತ್ತು ಗಾಂಭೀರ್ಯವೇ ಬೇರೆ. ತಾಸೆ, ಡೋಲಿನೊಂದಿಗೆ ತಾಯಿ ಮತ್ತು ಮರಿ ಹುಲಿಗಳ ನೃತ್ಯವನ್ನು ವರ್ಣನೆ ಮಾಡಲು ಸಾಧ್ಯವೇ ಇಲ್ಲ. ವೇಷಧಾರಿಗಳು ಕೇವಲ ಮನೋರಂಜನೆಗೆ ಮಾತ್ರವಲ್ಲದೆ ತಮ್ಮ ಕಷ್ಟ ಪರಿಹಾರಕ್ಕಾಗಿ ಹರಕೆಯ ವೇಷವನ್ನು ಹಾಕುವುದೂ ಉಂಟು. ಹುಲಿ ವೇಷಧಾರಿಗಳನ್ನು ಪ್ರೋತ್ಸಾಹಿಸಲು ಪಿಲಿಗೊಬ್ಬು ಇಂತಹ ಹಲವು ಸ್ಪರ್ಧೆಗಳನ್ನು ನಡೆಸುತ್ತಿರುವುದು ಹುಲಿ ವೇಷ ಉಳಿಯಲು ಇನ್ನೂ ಪ್ರೋತ್ಸಾಹ ದೊರೆಯುವಂತೆ ಮಾಡುತ್ತಿದೆ. ವೇಷಧಾರಿಗಳು ವ್ರತಾಚರಣೆ ಮಾಡಿ ತಾಯಿ ಸನ್ನಿಧಿಯಲ್ಲಿ ಸಮಾಪ್ತಿಗೊಳಿಸುವುದು ದಸರಾ ವೇಷದ ಕೊನೆಯ ಹಂತವಾಗಿದೆ.

ಕೊನೆಯದಾಗಿ ನವರಾತ್ರಿ ಮುಗಿದು ದುಶ್ಟ ಶಕ್ತಿಗಳೆಲ್ಲ ನಾಶವಾಗಿ ವಿಜಯ ದಶಮಿಯ ದಿನದಂದು ತಾಯಿ ವಿಜಯೋತ್ಸವವನ್ನು ರಾರಾಜಿಸುವ ದಿನ. ಅದೇ ರೀತಿ ನಮ್ಮಲ್ಲಿರುವ ಕೆಟ್ಟ ಗುಣಗಳು, ಕೆಟ್ಟ ಆಲೋಚನೆಗಳು ದೂರವಾಗಿ ನಮ್ಮಲ್ಲಿರುವ ರಾಕ್ಷಸ ಗುಣವೂ ಸಂಹಾರವಾಗಿ ತಾಯಿ ಶಾರದಾಂಬೆ ಎಲ್ಲರಿಗೂ ಸನ್ಮಂಗಳವನ್ನು ಉಂಟುಮಾಡಲಿ‌.

✍️ ಮಮತಾ. ಡಿ.ಕೆ. ಅನಿಲಕಟ್ಟೆ ವಿಟ್ಲ

Related Articles

Latest Articles