ಕಾಮಗಾರಿ ಹಿನ್ನೆಲೆಯಲ್ಲಿ ಹದಗೆಟ್ಟಿರುವ ಕಲ್ಲಡ್ಕದ ರಾಷ್ಟ್ರೀಯ ಹೆದ್ದಾರಿಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬೈಕ್‌ನಲ್ಲೇ ಸಂಚರಿಸಿ ಪರಿಶೀಲಿಸಿದ್ದಾರೆ.
ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕದಲ್ಲಿ ರಸ್ತೆ ಹದಗೆಟ್ಟಿರುವ ಬಗ್ಗೆ ಪ್ರಗತಿಪರಿಶೀಲನಾ ಸಭೆಯಲ್ಲಿ ಎನ್ಎಚ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಅಲ್ಲದೆ 2-3 ದಿನಗಳಲ್ಲಿ ರಸ್ತೆಯನ್ನು ಸಂಚಾರ ಯೋಗ್ಯ ಮಾಡಬೇಕೆಂದು ತಾಕೀತು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸ್ವತಃ ಜಿಲ್ಲಾಧಿಕಾರಿಯವರೇ ಖುದ್ದು ಸ್ಥಳಕ್ಕೆ ಹೋಗಿ ರಸ್ತೆ ಪರಿಶೀಲನೆ ನಡೆಸಿದರು.
ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆನೀರು ಸರಾಗವಾಗಿ ಹರಿಯಲು ಚರಂಡಿ ನಿರ್ಮಾಣ, ಪಾದಾಚಾರಿಗಳು ದಾಟಲು ನಾಲ್ಕು ಕಡೆ ಕಾಲುದಾರಿ ನಿರ್ಮಾಣ, ತ್ಯಾಜ್ಯಗಳನ್ನು ತೆಗೆಯುವುದು ಹಾಗೂ ಹೆದ್ದಾರಿ ಸಮತಟ್ಟುಗೊಳಿಸಲು ನಿರಂತರವಾಗಿ ವೆಟ್ ಮಿಕ್ಸ್ ಹಾಕಲು ಹೆದ್ದಾರಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.