ದಕ್ಷಿಣ ಕನ್ನಡ: ಗುರುಪುರ-ಬಂಗ್ಲೆಗುಡ್ಡೆ ಅಣೆಬಳಿಯ ಒಳ ರಸ್ತೆಯಲ್ಲಿ ಬಂಗ್ಲೆಗುಡ್ಡೆಯಿಂದ ಗುರುಪುರ ಪೇಟೆಗೆ ಬರುವಾಗ ಚಾಲಕನ ನಿಯಂತ್ರಣ ತಪ್ಪಿದ ಆಟೋರಿಕ್ಷಾ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರಣ ಯುವತಿ ಸ್ಥಳದಲ್ಲಿಯೇ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಸೆ.17ರ ಮಧ್ಯಾಹ್ನ 2 ಗಂಟೆಗೆ ಸಂಭವಿಸಿದೆ.
ಅರ್ಕುಳ ತುಪ್ಪೆಕಲ್ಲಿನ ಕುಟುಂಬವೊಂದು ಆಟೋ ರಿಕ್ಷಾ ಮೂಲಕ ಅದ್ಯಪಾಡಿ ದೇವಸ್ಥಾನಕ್ಕೆ ತೆರಳಿ ಹಿಂದಿರುತ್ತಿದ್ದ ವೇಳೆ ಗುರುಪುರ ಬಂಗ್ಲೆಗುಡ್ಡೆ ಇಳಿಜಾರು ರಸ್ತೆಯಾಗಿ ಅಣೆಬಳಿಯ ತಿರುವಿನಲ್ಲಿ ಆಟೋ ರಿಕ್ಷಾ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿತ್ತು. ಯುವತಿ ಅರ್ಕುಳ ತುಪ್ಪೆಕಲ್ಲು ನಿವಾಸಿ ಪ್ರೀತಿ ಸಪಲಿಗ (25) ಮೃತಪಟ್ಟು, ಚಾಲಕ ಸಹಿತ 5 ಮಂದಿ ಗಾಯಗೊಂಡಿದ್ದಾರೆ.
ಪ್ರೀತಿಯವರ ತಾಯಿ ಮೀನಾಕ್ಷಿ (55), ತಂಗಿ ಸ್ವಾತಿ (23), ಅತ್ತಿಗೆ ಶೋಭಾ (37), ಶೋಭಾ ಅವರ ಪುತ್ರ ಭವಿಷ್ (9) ಹಾಗೂ ಆಟೋ ಚಾಲಕ ಪದ್ಮನಾಭ ಗಾಯಗೊಂಡಿದ್ದಾರೆ. ಪ್ರಸ್ತುತ ಮೀನಾಕ್ಷಿ ಅವರ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಗಾಯಾಳುಗಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.