ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಬುಧವಾರ 100 ಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದೆ. ಈ ವೆಬ್‌ಸೈಟ್‌ಗಳು ಸಂಘಟಿತ ಹೂಡಿಕೆ ಮತ್ತು ಪಾರ್ಟ್ ಟೈಮ್ ಉದ್ಯೋಗ ವಂಚನೆಯಲ್ಲಿ ತೊಡಗಿಕೊಂಡಿದ್ದು, ಕೇಂದ್ರ ಶಾಕ್ ನೀಡಿದೆ.
ರಾಷ್ಟ್ರೀಯ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಯುನಿಟ್ (ಎನ್‌ಸಿಟಿಎಯು) ಕಳೆದ ವಾರ ಈ ಪೋರ್ಟಲ್‌ಗಳನ್ನು ಗುರುತಿಸಿತ್ತು, ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ವೆಬ್‌ಸೈಟ್‌ಗಳು ಹೊರ ದೇಶಗಳಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ದೊಡ್ಡ ಪ್ರಮಾಣದ ಹಣಕಾಸು ವಂಚನೆಯ ಮೂಲಕ ಗಳಿಸಿದ ಹಣವನ್ನು ಕಾರ್ಡ್ ನೆಟ್‌ವರ್ಕ್‌ಗಳು, ಕ್ರಿಪ್ಟೋಕರೆನ್ಸಿ, ವಿದೇಶಿ ಎಟಿಎಂ ವಿತ್‌ಡ್ರಾವಲ್ ಮತ್ತು ಅಂತರರಾಷ್ಟ್ರೀಯ ಫಿನ್‌ಟೆಕ್ ಕಂಪನಿಗಳನ್ನು ಬಳಸಿಕೊಂಡು ಭಾರತದಿಂದ ಹೊರತೆಗೆಯಲಾಗುತ್ತಿತ್ತು. ಈ ಕುರಿತು ಸಹಾಯವಾಣಿ ಮತ್ತು ರಾಷ್ಟ್ರೀಯ ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ಹಲವು ದೂರುಗಳು ಬಂದಿದ್ದವು.
ಇಂತಹ ವಂಚನೆಗಳಲ್ಲಿ ಸಾಮಾನ್ಯವಾಗಿ ಡಿಜಿಟಲ್ ಜಾಹೀರಾತುಗಳನ್ನು ಬಳಸಲಾಗುತ್ತದೆ ಎಂದು ಗೃಹ ಸಚಿವಾಲಯ (MHA) ಹೇಳಿದೆ. ಬಹು ಭಾಷೆಗಳಲ್ಲಿ ಇದನ್ನು ಪ್ರಸಾರ ಮಾಡಲಾಗುತ್ತಿತ್ತು. “ಮನೆಯಲ್ಲಿ ಕೂತು ಕೆಲಸ” ಮತ್ತು “ಮನೆಯಿಂದ ಆದಾಯ ಸಂಪಾದನೆ ಮಾಡುವುದು ಹೇಗೆ” ಎನ್ನುವಂಥ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಮತ್ತು ಮೆಟಾನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಹೀರಾತುಗಳನ್ನು ನೀಡುತ್ತಿದ್ದವು. ವಂಚಕರ ಗುರಿಗಳು ನಿವೃತ್ತ ಉದ್ಯೋಗಿಗಳು, ಮಹಿಳೆಯರು ಮತ್ತು ನಿರುದ್ಯೋಗಿ ಯುವಕರಾಗಿದ್ದರು.
ವಾಟ್ಸ್‌ಆಪ್ ಮತ್ತು ಟೆಲಿಗ್ರಾಮ್ ಬಳಸುವ ಏಜೆಂಟ್ ಸಂಭಾವ್ಯ ವ್ಯಕ್ತಿಯೊಂದಿಗೆ ಸಂಭಾಷಣೆಯನ್ನು ಪ್ರಾರಂಭಿಸುತ್ತಾನೆ. ವೀಡಿಯೊ, ಚಂದಾದಾರಿಕೆ ಮತ್ತು ಮ್ಯಾಪ್‌ಗಳಿಗೆ ರೇಟಿಂಗ್‌ನಂತಹ ಕೆಲವು ಕೆಲಸಗಳನ್ನು ಮಾಡಲು ಅವನನ್ನು ಕೇಳುತ್ತದೆ.
ಆರಂಭದಲ್ಲಿ ಕೆಲಸ ಮುಗಿದ ಮೇಲೆ ಕೆಲವು ಕಮಿಷನ್ ನೀಡಲಾಗುತ್ತದೆ ಮತ್ತು ನೀಡಿದ ಕೆಲಸಕ್ಕೆ ಪ್ರತಿಯಾಗಿ ಹೆಚ್ಚಿನ ಆದಾಯವನ್ನು ಪಡೆಯಲು ಹೂಡಿಕೆ ಮಾಡಲು ಕೇಳಲಾಗುತ್ತದೆ. ಕ್ರಮೇಣ ನಂಬಿಕೆಯನ್ನು ಅವರು ಗಳಿಸಿಕೊಳ್ಳುತ್ತಾರೆ. ದುಡ್ಡಿನ ಆಸೆಯಲ್ಲಿ ವ್ಯಕ್ತಿಗಳು ದೊಡ್ಡ ಮೊತ್ತವನ್ನು ಠೇವಣಿ ಮಾಡಿದಾಗ, ಮೊತ್ತವನ್ನು ಅವರು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ.
ಇಂತಹ ವಂಚನೆಗಳನ್ನು ತಪ್ಪಿಸಲು ಎಚ್ಚರಿಕೆಗಳನ್ನು ನೀಡಿದ MHA, ಇಂಟರ್ನೆಟ್‌ನಲ್ಲಿ ಹೆಚ್ಚಿನ ಕಮಿಷನ್ ಪಾವತಿಯೊಂದಿಗೆ ಯಾವುದೇ ಆನ್‌ಲೈನ್ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು, ಅದರ ಪ್ರಮುಖವಾಗಿ ತಿಳದುಕೊಳ್ಳಬೇಕು ಎಂದು ಹೇಳಿದರು.
ಯಾವುದೇ ಅಪರಿಚಿತ ವ್ಯಕ್ತಿಯು WhatsApp ಮತ್ತು ಟೆಲಿಗ್ರಾಮ್‌ನಲ್ಲಿ ನಿಮ್ಮನ್ನು ಸಂಪರ್ಕಿಸಿದರೆ, ಪರಿಶೀಲನೆಯಿಲ್ಲದೆ ಹಣಕಾಸಿನ ವಹಿವಾಟುಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ಹೇಳಿದೆ.