ಎಂ.ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ತನ್ನ ದಶಮಾನೋತ್ಸವದ ಸ್ಮರಣಾರ್ಥ ಗ್ರಾಮೀಣ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸುವ ಉದ್ದೇಶದಿಂದ ‘ಕ್ಲಾಸ್ ಆನ್ ವೀಲ್ಸ್’ ಡಿಜಿಟಲ್ ಬಸ್ ಸಂಚಾರ ಪ್ರಾರಂಭಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಹನೀಫ್ ತಿಳಿಸಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲೇ ಪ್ರಥಮವಾಗಿ ರೂಪಿಸಿರುವ ಈ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳಲಿದೆ. ವಾರ್ಷಿಕವಾಗಿ 5,000 ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ.
ಹವಾನಿಯಂತ್ರಿತ ಬಸ್‌ನ್ನು ಕಂಪ್ಯೂಟರ್ ತರಗತಿ ಕೊಠಡಿಯಂತೆ ಪರಿವರ್ತಿಸಲಾಗಿದೆ. 16 ಲ್ಯಾಪ್‌ಟಾಪ್, 16 ತಿರುಗುವ ಕುರ್ಚಿ, 16 ಡೆಸ್ಕ್‌ಗಳು, ಶಿಕ್ಷಕರಿಗೆ ಪ್ರತ್ಯೇಕ ಕಂಪ್ಯೂಟರ್, ಕಾನ್ಫರೆನ್ಸ್‌ಗೆ ಪ್ರಾಜೆಕ್ಟರ್, ಮ್ಯೂಸಿಕ್ ಸಿಸ್ಟಮ್, ಮೈಕ್, ಎಇಡಿ ಡಿಜಿಟಲ್ ಬೋರ್ಡ್, ವೈಫೈ ವ್ಯವಸ್ಥೆ, ಕಲರ್ ಪ್ರಿಂಟರ್, ಸ್ಕ್ಯಾನರ್, ಪವರ್ ಪಾಯಿಂಟ್, ಜನರೇಟರ್ ಇವೆ. ಮಕ್ಕಳು, ಶಿಕ್ಷಕರ ಹಾಜರಾತಿ ದೃಢಪಡಿಸಲು ಬಯೊಮೆಟ್ರಿಕ್ ವ್ಯವಸ್ಥೆಯೂ ಇರಲಿದೆ.
25 ಜನರನ್ನು ಸೇರಿಸಿ ಸಭೆ ನಡೆಸಬಹುದಾಗಿದೆ. ಮಕ್ಕಳ ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ವಿವರಿಸಿದರು.
ಸಂಸ್ಥೆಯ ಭಾಗಶಃ ಕೊಡುಗೆಯೊಂದಿಗೆ ಒಟ್ಟು ₹60 ಲಕ್ಷ ವೆಚ್ಚದಲ್ಲಿ ಬಸ್ ನಿರ್ಮಿಸಲಾಗಿದೆ. ದಿನಕ್ಕೆ 3-4 ಶಾಲೆಗಳಿಗೆ ಭೇಟಿ ನೀಡುವ ಯೋಜನೆಯಿದೆ. ವಾರ್ಷಿಕವಾಗಿ ₹10 ಲಕ್ಷ ಖರ್ಚು ಬರಬಹುದೆಂದು ಅಂದಾಜಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ತಿಳಿಸಿದರು.
‘ಕ್ಲಾಸ್ ಆನ್ ವೀಲ್ಸ್’ ಬಸ್‌ನ ಒಳ ಆವರಣವನ್ನು ತರಗತಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ