ಚಿತ್ರದುರ್ಗ: ಅಡಿಕೆ ಸಸಿಗಳಿಗೆ ಹಾಕಲು ಸಂಗ್ರಹಿಸಿಟ್ಟಿದ್ದ ಗೋವಿನ ಗಂಜಲು ಗುಂಡಿಗೆ ಬಿದ್ದು ತಂದೆ ಮಗ ಸಾವನ್ನಪ್ಪಿರುವ ಘಟನೆ ಹಿರಿಯೂರು ತಾಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಂದೆ ಮಹಾಲಿಂಗಪ್ಪ (52), ಮಗ ಪೃಥ್ವಿ (23) ಮೃತ ದುರ್ದೈವಿಗಳು. ತೋಟದಲ್ಲಿನ ಅಡಿಕೆ ಸಸಿಗಳಿಗೆ ಹಾಕಲು ಗೋವಿನ ಗಂಜಲನ್ನು 8 ಅಡಿ ಗುಂಡಿಯಲ್ಲಿ ಸಂಗ್ರಹಿಸಿಡಲಾಗಿತ್ತು.
ಆದರೆ ಇದನ್ನು ಗಮನಿಸದೇ ಮೊದಲು ತಂದೆ ಕಾಲು ಜಾರಿ ಬಿದ್ದಿದ್ದಾರೆ. ತಕ್ಷಣ ತಂದೆಯನ್ನು ರಕ್ಷಣೆ ಮಾಡಲೆಂದು ಹೋಗಿ ಮಗನೂ ಗುಂಡಿಗೆ ಬಿದ್ದಿದ್ದಾನೆ.
ಗಂಜಲಿನ ವಾಸನೆ ತಾಳಲಾರದೇ ತಂದೆ, ಮಗ ಇಬ್ಬರು ಅಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಮಾಹಿತಿ ತಿಳಿದು ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಕುರಿತು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.