ಕಾಫಿನಾಡು ಚಿಕ್ಕಮಗಳೂರಲ್ಲಿ ಹತ್ತು ವರ್ಷಗಳ ಬಳಿಕ ನಕ್ಸಲ್ ಚಟುವಟಿಕೆ ಆರಂಭವಾಗಿ ಎಂಬ ಶಂಕೆ ವ್ಯಕ್ತವಾಗಿದೆ ಈ ಹಿನ್ನೆಲೆಯಲ್ಲಿ ಆ್ಯಂಟಿ ನಕ್ಸಲ್ ಫೋರ್ಸ್ (ANF) ಮತ್ತು ಪೊಲೀಸರು ತಪಾಸಣೆಗೆ ಇಳಿದಿದ್ದಾರೆ. ಈ ವೇಳೆ ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೆಗೌಡ ಎಂಬುವರ ಮನೆಯೊಂದರಲ್ಲಿ 3 ಬಂದೂಕು ಪತ್ತೆಯಾಗಿವೆ. ಈ ಮನೆಗೆ ನಕ್ಸಲ್ ನಾಯಕಿ ಮುಂಗಾರು ಲತಾ ಮತ್ತು ಆಕೆಯ ತಂಡ ಭೇಟಿ ನೀಡಿರುವ ಸುಳಿವು ಸಿಕ್ಕಿದೆ.
ಬಂದೂಕು ಸಿಕ್ಕಿರುವ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್, ಸಿಐಟಿ ಎಡಿಜಿಪಿ ಪ್ರಣಬ್ ಮೊಹಂತಿ ಭೇಟಿ, ಪರಿಶೀಲನೆ ನಡೆಸಿದರು.
ಒತ್ತುವರಿ, ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಕ್ಸಲರು ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಸಭೆಗಳನ್ನು ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೆ ಇಬ್ಬರನ್ನು ವಶಕ್ಕೆ ಪಡೆದು ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ತೀವ್ರ ಕೂಂಬಿಂಗ್ ಕಾರ್ಯಚರಣೆ ನಡೆಯುತ್ತಿದೆ.