ಮಾಲ್ವೊಂದರಲ್ಲಿ ಎಸ್ಕಲೇಟರ್ ಮೂಲಕ ತೆರಳುವಾಗ ತಂದೆಯ ತೋಳಿನಿಂದ ಒಂದು ವರ್ಷದ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ಛತ್ತೀಸ್‌ಗಢದ ರಾಯಪುರ ನಗರದಲ್ಲಿ ನಡೆದಿದೆ.
ರಾಯಪುರ ನಗರದ ಪ್ರತಿಷ್ಠಿತ ಸಿಟಿ ಸೆಂಟರ್ ಮಾಲ್ಗೆ ವ್ಯಕ್ತಿಯೊಬ್ಬರು ತನ್ನ ಕುಟುಂಬದ ಜೊತೆ ಭೇಟಿ ನೀಡಿರುತ್ತಾರೆ. ಈ ವೇಳೆ ಒಂದು ವರ್ಷದ ಮಗುವನ್ನು ಎತ್ತುಕೊಂಡು ಮಾಲ್ನ ಎಸ್ಕಲೇಟರ್ ಅಲ್ಲಿ ಹೋಗುತ್ತಿರುತ್ತಾರೆ. ಆಗ ಅವರ ಇನ್ನೊಬ್ಬ ಮಗ 5 ವರ್ಷದ ಬಾಲಕನ ಎಸ್ಕಲೇಟರ್ ಏರಲು ಪ್ರಯತ್ನಿಸುತ್ತಿರುತ್ತದೆ. ಈ ವೇಳೆ ಬಾಲಕನನ್ನ ಎಸ್ಕಲೇಟರ್ ಹತ್ತಲು ತಡೆಯಲು ಹೋಗುವಾಗ ತಂದೆಯ ತೋಳಲ್ಲಿದ್ದ ಮಗು ಜಾರಿ ಕೆಳಕ್ಕೆ ಬಿದ್ದಿದೆ ಎಂದು ಹೇಳಲಾಗಿದೆ.
ಪರಿಣಾಮ ತೀರ ಮೇಲಿನಿಂದ ಮಗು ಬಿದ್ದಿದ್ದರಿಂದ ಆತಂಕಗೊಂಡ ತಂದೆ ತಕ್ಷಣ ಓಡಿ ಬಂದು ಮಗುವನ್ನು ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಆದರೆ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗು ತಂದೆಯ ಕೈಯಿಂದ ಜಾರಿ ಬೀಳುತ್ತಿರುವ ದೃಶ್ಯ ಮಾಲ್ನ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ ಎನ್ನಲಾಗಿದೆ.