ಇಸ್ರೋ್ ಚಂದ್ರಯಾನ-3 ಯೋಜನೆ ಮೂಲಕ ಅಗ್ರಗಣ್ಯ ಸಾಧನೆ ಮಾಡಿದೆ. ಇಸ್ರೋ ಕೀರ್ತಿ ಜಗತ್ತಿನ ಉದ್ದಗಲಕ್ಕೂ ಹರಡಿದೆ. ಅದರಲ್ಲೂ ಚಂದ್ರಯಾನ-3 ಯೋಜನೆ ಮನುಷ್ಯರ ಭವಿಷ್ಯಕ್ಕೆ ದೊಡ್ಡ ತಿರುವು ಸಿಗುವಂತೆ ಮಾಡಿದೆ. ಪ್ರಪಂಚ ಈ ಸಂಭ್ರಮದಲ್ಲಿ ಇರುವಾಗ ಭಾರತೀಯರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ!
ಚಂದ್ರಯಾನ-3′ ಯೋಜನೆ ಯಶಸ್ಸಿಗೆ ಶ್ರಮಿಸಿದ ವಿಜ್ಞಾನಿಗಳಿಗೆ, ನಾವಿಕನಂತೆ ಕೆಲಸ ಮಾಡಿದ್ದ ಇಸ್ರೋ ಮುಖ್ಯಸ್ಥರು ತಮ್ಮ ಆತ್ಮಚರಿತ್ರೆ ಪ್ರಕಟಿಸಲು ಸಿದ್ಧತೆ ನಡೆಸಿದ್ದಾರೆ.
ಅಷ್ಟಕ್ಕೂ ಚಂದ್ರನ ಅಂಗಳಕ್ಕೆ ಲ್ಯಾಂಡರ್ ಉಡಾವಣೆ, ಸೂರ್ಯನ ಸಂಶೋಧನೆಗೆ ಉಪಗ್ರಹ ಉಡಾವಣೆ ಮತ್ತು ಮನುಷ್ಯರನ್ನ ಅಂತರಿಕ್ಷಕ್ಕೆ ಕಳುಹಿಸಲು ತಯಾರಿ. ಹೀಗೆ ಇಸ್ರೋ ಹೆಸರನ್ನ ಮತ್ತಷ್ಟು ಎತ್ತರಕ್ಕೆ ಏರಿಸಲು ಕಾರಣವಾಗುತ್ತಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಧ್ಯಕ್ಷ ಎಸ್. ಸೋಮನಾಥ್, ತಮ್ಮ ಆತ್ಮಚರಿತ್ರೆ ಬಿಡುಗಡೆ ಮಾಡುವ ಮಾಹಿತಿ ನೀಡಿದ್ದಾರೆ. ಇದು ಭಾರತೀಯರ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಿದೆ.
ಈಗ ಇಸ್ರೋ ಅಧ್ಯಕ್ಷರಾಗಿ, ದೊಡ್ಡ ಮೊತ್ತದ ಸಂಬಳ ಪಡೆಯುವ ಇಸ್ರೋ ಅಧ್ಯಕ್ಷರು ಈ ಹಂತಕ್ಕೆ ಬರುವ ಮೊದಲು ಸಾಕಷ್ಟು ಸಮಸ್ಯೆ ಎದುರಿಸಿದ್ದರಂತೆ. ಹಾಸ್ಟೆಲ್ ವೆಚ್ಚ ಕಡಿಮೆ ಮಾಡಲು ಸಾಧಾರಣ ಕೊಠಡಿಯಲ್ಲಿ ವಾಸ, ಸಾರಿಗೆ ವೆಚ್ಚ ಉಳಿಸಲು ಹಳೆಯ ಸೈಕಲ್ ಬಳಕೆ ಸೇರಿದಂತೆ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಲು ಅವರು ಸಾಕಷ್ಟು ಕಷ್ಟಪಟ್ಟಿದ್ದರೆಂಬ ಮಾಹಿತಿ ಇದೆ. ಇದೀಗ ತಮ್ಮ ಜೀವನದಲ್ಲಿ ಅನುಭವಿಸಿದ ಎಲ್ಲಾ ಸಮಸ್ಯೆ & ನೋವಿನ ಬಗ್ಗೆ ಎಸ್. ಸೋಮನಾಥ್ ಆತ್ಮಚರಿತ್ರೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಮಲಯಾಳಂ ಭಾಷೆಯಲ್ಲಿ ಆತ್ಮಚರಿತ್ರೆ ಬಿಡುಗಡೆಯಾಗಲಿದ್ದು ‘ನಿಲಾವು ಕುಡಿಚ್ಚ ಸಿಂಹಗಳ್’ ಎಂಬ ಟೈಟಲ್ ಇಡಲು ತೀರ್ಮಾನಿಸಲಾಗಿದೆ. ಕೇರಳ ಮೂಲದ ಲಿಪಿ ಪಬ್ಲಿಕೇಷನ್ಸ್‌ನಿಂದ ಪ್ರಕಟವಾಗುತ್ತಿರುವ ಈ ಪುಸ್ತಕ ಮುಂದಿನ ತಿಂಗಳು ಅಂದರೆ ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಮೂಲಕ ‘ಚಂದ್ರಯಾನ-3’ ಯೋಜನೆ ಯಶಸ್ಸನ್ನು ಸಂಭ್ರಮಿಸಿದ್ದ ಇಡೀ ಜಗತ್ತಿಗೆ, ಆ ಯೋಜನೆ ಹಿಂದಿನ ರೂವಾರಿಯ ಕಷ್ಟಗಳ ಪರಿಚಯ ಕೂಡ ಆಗಲಿದೆ.