Saturday, May 24, 2025

ಬಾಂಗ್ಲಾದಿಂದ ಅಪ್ರಾಪ್ತೆಯರ ಕಳ್ಳಸಾಗಣೆ ಮಾಡಿ ವೇಶ್ಯಾವಾಟಿಕೆ – ಮೂವರ ಬಂಧನ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಸಿಸಿಬಿ ಪೊಲೀಸರು ನಡೆಸಿದ ದಾಳಿಯಿಂದ ಬೆಳಕಿಗೆ ಬಂದಿದೆ. ಬೆಂಗಳೂರಿನ ಹೊಂಗಸಂದ್ರದ ಮನೆಯೊಂದರ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ದಳ ದಾಳಿ ನಡೆಸಿದ್ದು, ಈ ವೇಳೆ ಮನೆಯಲ್ಲಿ ಇಬ್ಬರು ಹುಡುಗಿಯರು ಪತ್ತೆಯಾಗಿದ್ದಾರೆ.

ದಾಳಿ ವೇಳೆ ಪತ್ತೆಯಾದ ಇಬ್ಬರೂ ಸಹ ಅಪ್ರಾಪ್ತೆಯರು ಬಾಂಗ್ಲಾ ಮೂಲದವರು ಎನ್ನಲಾಗಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ಒರಿಸ್ಸಾ ಮೂಲದವರು, ಒಬ್ಬ ಸ್ಥಳೀಯ ನಿವಾಸಿ ಬಂಧಿತ ಆರೋಪಿಗಳಾಗಿದ್ದಾರೆ. ಈ ಪೈಕಿ ಸ್ಥಳೀಯವನು ಸಾಫ್ಟ್​​ವೇರ್ ಇಂಜಿನಿಯರ್ ಆಗಿದ್ದಾನೆ.

ಸ್ಥಳೀಯ ಆರೋಪಿ ಎಳೆ ಹುಡುಗಿಯರೇ ಬೇಕು ಎಂದು ಕರೆಸಿಕೊಂಡಿದ್ದ. ಹೀಗಾಗಿ ಇನ್ನಿಬ್ಬರು ಆರೋಪಿಗಳು ಅಪ್ರಾಪ್ತೆಯರನ್ನು ಕರೆತಂದಿದ್ದರು ಎನ್ನಲಾಗಿದೆ. ಬಂಧಿತರ ವಿಚಾರಣೆ ವೇಳೆ, ಅಪ್ರಾಪ್ತ ಹುಡುಗಿಯರನ್ನು ಬಾಂಗ್ಲಾದೇಶದಿಂದ ಕಳ್ಳಸಾಗಣೆ‌ಮಾಡಿ ಕರೆತಂದಿದ್ದು ಪತ್ತೆಯಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. 15 ಹಾಗೂ 16 ವಯಸ್ಸಿನ ಹುಡುಗಿಯರನ್ನು ಕರೆತರಲಾಗಿತ್ತು. ನಂತರ ಅವರನ್ನು ಹೊಂಗಸಂದ್ರದ ಬಾಡಿಗೆ ಮನೆಯಲ್ಲಿ ಇರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು.

ಅಪ್ರಾಪ್ತೆಯರ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಸಂಬಂಧ ಬೊಮ್ಮನಹಳ್ಳಿ ಠಾಣೆಯಲ್ಲಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆದರೆ ಈಗ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

Related Articles

Latest Articles