ಜರ್ಮನಿ ಮೂಲದ ಗಾಯಕಿ ಕೆಸೆಂಡ್ರಾ ಮೆ ಸ್ಪಿಟ್‌ಮನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಪಲ್ಲದಮ್‌ನಲ್ಲಿ ಭೇಟಿಯಾಗಿದ್ದಾರೆ. ಮೋದಿ ಭೇಟಿ ವೇಳೆ ಕೆಸೆಂಡ್ರಾ ‘ಅಚ್ಯುತಂ ಕೇಶವಂ’ ಮತ್ತು ತಮಿಳು ಹಾಡೊಂದನ್ನು ಹಾಡಿದ್ದಾರೆ.v
ಕಳೆದ ವರ್ಷ ಕೆಸೆಂಡ್ರಾ ಅವರ ತಮಿಳು ಮತ್ತು ಕೆಲವು ಭಾರತೀಯ ಭಕ್ತಿ ಗೀತೆಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿತ್ತು. ಮನ್ ಕಿ ಬಾತ್ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿಯವರು ಕೆಸೆಂಡ್ರಾ ಅವರ ಹೆಸರನ್ನು ಉಲ್ಲೇಖಿಸಿ ಶ್ಲಾಘಿಸಿದ್ದರು.
ಕೆಸೆಂಡ್ರಾ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದು, ಮೋದಿ ಎದುರು ಹಾಡು ಹಾಡಿದ್ದಾರೆ. ಕೆಸೆಂಡ್ರಾ ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಮಲಯಾಳಂ, ತಮಿಳು, ಉರ್ದು, ಅಸ್ಸಾಮಿ ಮತ್ತು ಬೆಂಗಾಲಿ ಭಾಷೆಗಳ ಹಾಡನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಚಿರಪರಿಚಿತರಾಗಿದ್ದಾರೆ.
ಮನ್ ಕಿ ಬಾತ್‌ನಲ್ಲಿ ಕೆಸೆಂಡ್ರಾ ಬಗ್ಗೆ ಹೇಳುವ ವೇಳೆ, ‘ಆಕೆಯದ್ದು ಎಷ್ಟು ಮಧುರ ಧ್ವನಿ, ಹಾಡಿನ ಪ್ರತಿ ಪದವೂ ಭಾವನಾತ್ಮಕವಾಗಿದೆ, ದೇವರಲ್ಲಿ ಇರುವ ಭಕ್ತಿಯನ್ನು ಆಕೆಯ ಹಾಡಿನಲ್ಲಿ ಕಾಣಬಹುದು. ಈ ಮಧುರ ಧ್ವನಿಯು ಜರ್ಮನಿಯ ಮಗಳದ್ದು ಎಂದು ನಾನು ಬಹಿರಂಗಪಡಿಸಿದರೆ, ಬಹುಶಃ ನೀವು ಇನ್ನಷ್ಟು ಆಶ್ಚರ್ಯಪಡುತ್ತೀರಿ! ಈ ಮಗಳ ಹೆಸರು ಕೆಸೆಂಡ್ರಾ ಮೇ ಸ್ಪಿಟ್‌ಮನ್’ ಎಂದು ಪ್ರಧಾನಿ ಮೋದಿ ಹೇಳಿದ್ದರು. ಭೇಟಿ ವೇಳೆ ಕೆಸೆಂಡ್ರಾ ಅವರ ತಾಯಿ ಕೂಡ ಜತೆಯಲ್ಲಿದ್ದರು.