ಛತ್ತೀಸ್ ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಬಣ್ಣದ ಆಧಾರದ ಮೇಲೆ ವಿವಾಹಿತ ಸಂಗಾತಿಯನ್ನು ಬಿಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ ಎಂದು ಆದೇಶಿಸಿದೆ.
ಪತಿ-ಪತ್ನಿಯರ ವಿಚ್ಛೇದನ ಪ್ರಕರಣದ ವಿಚಾರಣೆ ನಡೆದಿದ್ದು ಛತ್ತೀಸ್ ಗಢ ಹೈಕೋರ್ಟ್ ಈ ತೀರ್ಪು ನೀಡಿದೆ. ಪತಿಗೆ ಖಡಕ್ ಎಚ್ಚರಿಕೆ ನೀಡಿದಲ್ಲದೆ, ಫೇರ್‌ನೆಸ್ ಕ್ರೀಮ್ ಉದ್ಯಮದ ಬಗ್ಗೆಯೂ ತಮ್ಮ ಅಸಮಾಧಾನವನ್ನು ಹೊರಹಾಕಿದೆ.
ನ್ಯಾಯಮೂರ್ತಿ ಗೌತಮ್ ಭಾದುರಿ ಮತ್ತು ನ್ಯಾಯಮೂರ್ತಿ ದೀಪಕ್ ಕುಮಾರ್ ತಿವಾರಿ ಅವರಿದ್ದ ಪೀಠವು ವಿಚಾರಣೆ ವೇಳೆ, ಯಾವುದೇ ಕಾರಣಕ್ಕೆ ಪತಿ-ಪತ್ನಿಯರ ಬಣ್ಣದ ಆಧಾರದ ಮೇಲೆ ವಿಚ್ಛೇದನ ನೀಡಲು ಸಾಧ್ಯ ಇಲ್ಲ ಎಂದು ಹೇಳಿದೆ.
ವ್ಯಕ್ತಿಯೊಬ್ಬರು ತನ್ನ ಪತ್ನಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತನ್ನ ಹೆಂಡತಿ ತನ್ನನ್ನು ತೊರೆದಿದ್ದಾರೆ ಮತ್ತು ಎಷ್ಟು ಪ್ರಯತ್ನ ಮಾಡಿದರೂ ಅವರು ಮನೆಗೆ ಮರಳಲು ನಿರಾಕರಿಸುತ್ತಿದ್ದರು ಎಂದು ಪತಿ ಹೇಳಿಕೊಂಡಿದ್ದಾರೆ. ಆದರೆ, ಪತಿ ತನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂಬುದು ಪತ್ನಿಯ ವಾದವಾಗಿತ್ತು. ತನ್ನ ಚರ್ಮದ ಬಣ್ಣವನ್ನು ಗೇಲಿ ಮಾಡುವ ಮೂಲಕ ನಿಂದನೆ ಮತ್ತು ನಿಂದನೀಯ ಪದಗಳನ್ನು ಪತಿ ಬಳಸುತ್ತಿದ್ದರು.
ಗರ್ಭಾವಸ್ಥೆಯಲ್ಲಿ ಪತಿ ತನಗೆ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದರು. ತನ್ನ ಕಪ್ಪನೆಯ ಚರ್ಮದಿಂದಾಗಿ ಬೇರೆ ಮಹಿಳೆಯನ್ನು ಮದುವೆಯಾಗುವುದಾಗಿ ಪದೇ ಪದೆ ಅಪಹಾಸ್ಯ ಮಾಡುತ್ತಿದ್ದರು ಎಂದು ಪತ್ನಿ ತನ್ನ ಪತಿ ವಿರುದ್ಧ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು. ಎರಡೂ ಕಕ್ಷಿದಾರರ ವಾದ ಆಲಿಸಿದ ಛತ್ತೀಸ್ ಗಢ ಹೈಕೋರ್ಟ್, ಪತ್ನಿಯ ಆರೋಪಗಳನ್ನು ಹೆಚ್ಚು ದೃಢವಾಗಿ ಪರಿಗಣಿಸಿ, ಪತಿಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತು.
ಅಲ್ಲದೇ, ಕೇವಲ ಚರ್ಮದ ಬಣ್ಣದ ಆಧಾರದ ಮೇಲೆ ವಿವಾಹಿತ ಸಂಗಾತಿಯನ್ನು ಬಿಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿತು. ಚರ್ಮದ ಬಣ್ಣದ ಆಧಾರದ ಮೇಲೆ ತಾರತಮ್ಯ ತೊಡೆದುಹಾಕಲು ಸಾಮಾಜಿಕ ಬದಲಾವಣೆಯ ಅಗತ್ಯವನ್ನು ನ್ಯಾಯಾಲಯ ಒತ್ತಿ ಹೇಳಿದೆ. ಕಾಸ್ಕೆಟಿಕ್ಸ್ ಉದ್ಯಮವು ಚರ್ಮವನ್ನು ಹೊಳಪುಗೊಳಿಸುವ ಉತ್ಪನ್ನಗಳೊಂದಿಗೆ ಕಪ್ಪು ತ್ವಚೆಯ ಜನರನ್ನು ಗುರಿಯಾಗಿರಿಸಿಕೊಳ್ಳುತ್ತದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.