ದೇಶಾದ್ಯಂತ ಲೋಕಸಭಾ ಚುನಾವಣಾ ಕಾವು ಹೆಚ್ಚಾಗುತ್ತಲೇ ಇದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯಲ್ಲಿ ನಿರತರಾಗಿದ್ದು, ನಾಮಪತ್ರದ ಜೊತೆ ನಿಯಮಾನುಸಾರ ತಮ್ಮ ಬಳಿಯಿರುವ ಆಸ್ತಿ-ಹಣದ ಮಾಹಿತಿಯ ಅಫಿಡವಿಟ್ ಅನ್ನು ಸಲ್ಲಿಸುತ್ತಿದ್ದಾರೆ.
ಯಾವ ಅಭ್ಯರ್ಥಿಯ ಬಳಿ ಎಷ್ಟು ಆಸ್ತಿ ಇದೆ ಎಂಬ ವಿಷಯ ಸುದ್ದಿಯಾಗುತ್ತಿದೆ. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮತದಾರರ ಹುಬ್ಬೇರುವಂತೆ ಮಾಡಿದೆ. ಅಭ್ಯರ್ಥಿಯ ಪ್ರತಿಯೊಂದು ಆಸ್ತಿಯ ಬಗ್ಗೆ ತಿಳಿಯಲು ಮತದಾರರಿಗೆ ಸಂಪೂರ್ಣ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಭ್ಯರ್ಥಿಗೂ ಗೌಪತ್ಯೆಯ ಹಕ್ಕಿದೆ
ಅಭ್ಯರ್ಥಿ ಕೂಡ ತಮಗೆ ಸಂಬಂಧಿಸದ ವಿಷಯಗಳ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ, ಅಭ್ಯರ್ಥಿಗಳು ಗಣನೀಯ ಮೌಲ್ಯದ ಅಥವಾ ಐಷಾರಾಮಿ ಜೀವನಶೈಲಿಯನ್ನು ಪ್ರತಿಬಿಂಬಿಸದ ಹೊರತು ಅವರು ಅಥವಾ ಅವರ ಕುಟುಂಬದ ಒಡೆತನದ ಪ್ರತಿಯೊಂದು ಆಸ್ತಿಯನ್ನು ಬಹಿರಂಗಪಡಿಸಬೇಕಾಗಿಲ್ಲ ಎಂದು ಹೇಳಿದೆ.
ಅರುಣಾಚಲ ಪ್ರದೇಶದ ತೇಜು ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಕರಿಖೋ ಕ್ರಿ ಅವರ 2019 ರ ಚುನಾವಣೆ ಪ್ರಕರಣದಲ್ಲಿ ಈ ತೀರ್ಪನ್ನು ನೀಡಲಾಗಿದೆ. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಕರಿಖೋ ಕ್ರಿ ಚುನಾವಣೆಯನ್ನು ಅನೂರ್ಜಿತ ಎಂದು ಘೋಷಿಸಿದ ಗೌಹಾಟಿ ಹೈಕೋರ್ಟ್‌ನ ಆದೇಶವನ್ನು ರದ್ದುಗೊಳಿಸಿತು.
ಏನಿದು ಪ್ರಕರಣ?
ಕರಿಖೋ ಕ್ರಿ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವಾಗ ಅವರ ಪತ್ನಿ ಮತ್ತು ಮಗನ ಒಡೆತನದ ಮೂರು ವಾಹನಗಳನ್ನು ಬಹಿರಂಗಪಡಿಸದೆ ಅನಗತ್ಯ ಪ್ರಭಾವ ಬೀರಿದ್ದಾರೆ ಎಂದು ಪ್ರತಿಸ್ಪರ್ಧಿ ಅಭ್ಯರ್ಥಿ ಆರೋಪಿಸಿದ್ದರು. ಕ್ರಿ ನಾಮಪತ್ರ ಸಲ್ಲಿಸುವ ಮೊದಲು ವಾಹನಗಳನ್ನು ಉಡುಗೊರೆಯಾಗಿ ಅಥವಾ ಮಾರಾಟ ಮಾಡಿರುವುದನ್ನು ಕಂಡುಕೊಂಡ ನಂತರ, ವಾಹನಗಳು ಇನ್ನೂ ಕ್ರಿ ಅವರ ಪತ್ನಿ ಮತ್ತು ಮಗನ ಒಡೆತನದಲ್ಲಿದೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.