Saturday, January 25, 2025

ರಾಜ್ಯದಲ್ಲೇ ಮೊಟ್ಟಮೊದಲ ಮೂಳೆ ದಾನ: ಸಾವಿನಲ್ಲೂ ಸಾರ್ಥಕತೆ – ಹೇಗೆ ಉಪಯೋಗವಾಗಲಿದೆ ಗೊತ್ತಾ?

ಕರ್ನಾಟಕ ರಾಜ್ಯದ ಆರೋಗ್ಯ ಕ್ಷೇತ್ರದಲ್ಲೇ ಮೊಟ್ಟ ಮೊದಲ ಬಾರಿಗೆ ಮೃತದೇಹದ ಮೂಳೆ ದಾನ ಮಾಡಲಾಗಿದೆ.

ಸೋಮವಾರಪೇಟೆಯ ಜಂಬೂರು ಗ್ರಾಮದ ನಿವಾಸಿ ಈಶ್ವರ ಎನ್. (32) ಎಂಬವರೇ ಸಾವಿನಲ್ಲೂ ಸಾರ್ಥಕತೆ ಮೆರೆದವರು.

ಇದೇ ಡಿ.21 ರಂದು ರಾತ್ರಿ ತಾವು ಚಲಾಯಿಸುತ್ತಿದ್ದ ಪಿಕ್ ಅಪ್ ವಾಹನ ಗರಗಂದೂರು ಬಳಿ ನಿಯಂತ್ರಣ ಕಳೆದುಕೊಂಡು ಮಗುಚಿಕೊಂಡ ಪರಿಣಾಮ ಈಶ್ವರ್ ಎನ್. ಅವರ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರಿನ ನಿಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಈಶ್ವರ ಅವರು ಗಂಭೀರ ಸ್ಥಿತಿಯಲ್ಲಿದ್ದ ವಿಚಾರವನ್ನು ವೈದ್ಯರು ಅವರ ಸಹೋದರಿ ಸೌಮ್ಯ ಬಳಿ ತಿಳಿಸಿದಾಗ ಸ್ವಯಂಪ್ರೇರಿತರಾಗಿ ಅಂಗಾಂಗ ದಾನದ ಕುರಿತು ಆಸಕ್ತಿ ತೋರಿದರು. ಕಸಿ ಸಂಯೋಜಕಿ ಅಕ್ಷತಾ ಶೆಟ್ಟಿ ಹಾಗೂ ನರಶಸ್ತ್ರ ಚಿಕಿತ್ಸಕರು ಸೇರಿದಂತೆ ವೈದ್ಯಕೀಯ ತಂಡ ಸಮಾಲೋಚನೆ ನಡೆಸಿತು. ನಂತರ ಸಹೋದರಿ ಸೌಮ್ಯ ಹಾಗೂ ಕುಟುಂಬ ವರ್ಗ ಈಶ್ವರ ಅವರ ಮೂಳೆಗಳನ್ನು ಕಸಿ ಮಾಡಲು ದಾನ ನೀಡುವುದಾಗಿ ಒಪ್ಪಿಕೊಂಡರು.

ಈ ಮೂಳೆ ದಾನದಿಂದ ಭವಿಷ್ಯದಲ್ಲಿ ಕ್ಯಾನ್ಸರ್ ಪೀಡಿತ ಆರು ಮಕ್ಕಳ ಕೈ-ಕಾಲುಗಳನ್ನು ಸಮರ್ಥವಾಗಿ ಉಳಿಸಬಹುದು. ಮೂಳೆಗಳನ್ನು ಅಂಗ ಉಳಿಸುವ ಶಸ್ತ್ರಚಿಕಿತ್ಸೆಗಳಿಗೆ ಬಳಸಲಾಗುತ್ತದೆ. ಯುವ ಕ್ಯಾನ್ಸರ್ ರೋಗಿಗಳಿಗೆ ಹೊಸ ಭರವಸೆಯನ್ನು ನೀಡುತ್ತದೆ ಎಂದು ಡಾ.ವರುಣ್ ಶೆಟ್ಟಿ ಹೇಳಿದ್ದಾರೆ.

ಈ ದಾನವನ್ನು ಕರ್ನಾಟಕದಲ್ಲಿ ಪ್ರವರ್ತಕ ಉಪಕ್ರಮವೆಂದು ಶ್ಲಾಘಿಸಲಾಗುತ್ತಿದೆ. ಇದು ರಾಜ್ಯದಲ್ಲಿಯೇ ಮೊಟ್ಟಮೊದಲ ಮೃತದೇಹದ ಮೂಳೆ ದಾನವಾಗಿದ್ದು, ಪರಹಿತಚಿಂತನೆಯ ಕಾರ್ಯಗಳನ್ನು ಬೆಂಬಲಿಸುವಲ್ಲಿ ಆರೋಗ್ಯ ಸಂಸ್ಥೆಗಳು ಮತ್ತು ಕುಟುಂಬಗಳ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸುತ್ತದೆ.
ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಶೆಟ್ಟಿ ಅವರು ಕುಟುಂಬದ ಬೆಂಬಲ, ಸಹಕಾರ ಮತ್ತು ವೈದ್ಯಕೀಯ ತಂಡದ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

Related Articles

Latest Articles