ಕಾರವಾರ: ಹೊನ್ನಾವರ ತಾಲ್ಲೂಕಿನ ಮುಗಳಿ ಕಡಲಧಾಮ ಪ್ರದೇಶದಲ್ಲಿ ಶನಿವಾರ ಎರಡು ಬಲೀನ್ ತಿಮಿಂಗಿಲಗಳ ಕಳೆಬರ ಪತ್ತೆಯಾಗಿದೆ.
ಕಳೆದ ವಾರ 35 ಮೀ ಉದ್ದದ ಗಂಡು ತಿಮಿಂಗಿಲದ ಕಳೆಬರ ಪತ್ತೆಯಾಗಿತ್ತು. ಈಗ ಅದೇ ಪ್ರದೇಶದಿಂದ ಸ್ವಲ್ಪ ದೂರದಲ್ಲಿ ಅಂದಾಜು 25 ಮೀ. ಉದ್ದದ ಹೆಣ್ಣು ತಿಮಿಂಗಿಲದ ಕಳೆಬರ ಪತ್ತೆಯಾಗಿದೆ.
ಈ ಕಳೆಬರ ಸಿಕ್ಕ ಜಾಗದ 700 ಮೀ. ದೂರದಲ್ಲಿ ಮರಿಯೊಂದರ ಕಳೆಬರ ದೊರೆತಿದೆ.
‘ಬಲೀನ್ ತಿಮಿಂಗಿಲಗಳ ಸಂತಾನೋತ್ಪತ್ತಿಯ ಅವಧಿ ಇದಾಗಿದ್ದು ಶೀತವಲಯದಿಂದ ನೇತ್ರಾಣಿ, ಮುಗಳಿ ಕಡಲತೀರಕ್ಕೆ ಸಮೀಪಕ್ಕೆ ಬರುತ್ತವೆ. ಹೀಗೆ ಬರುವ ವೇಳೆ ತಿಮಿಂಗಿಲಗಳಿಗೆ ಹಡಗು ಡಿಕ್ಕಿಯಾಗಿ ಮೃತಪಟ್ಟಿರುವ ಸಾಧ್ಯತೆ ಇದೆ’ ಎಂದು ಕಡಲಜೀವಶಾಸ್ತ್ರ ತಜ್ಞ ಪ್ರಕಾಶ ಮೇಸ್ತ ಹೇಳಿದರು.
‘ತಿಮಿಂಗಿಲದ ಕಳೆಬರ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ಕಡಲಜೀವಶಾಸ್ತ್ರ ಅಧ್ಯಯನ ಕೇಂದ್ರದ ತಜ್ಞರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಬಹುದು’ ಎಂದು ಸ್ಥಳೀಯ ಅರಣ್ಯ ಸಿಬ್ಬಂದಿ ಹೇಳಿದರು.