ಸಾಗರ: ಮದುವೆ ಆಗುವುದಾಗಿ ನಂಬಿಸಿ, ಯುವತಿಯ ಜೊತೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದ ಆರೋಪದ ಮೇರೆಗೆ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಘಟಕದ ಕಾರ್ಯದರ್ಶಿ ಅರುಣ್ ಕುಗ್ವೆ ಅವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಯುವತಿ ಕುಟುಂಬಕ್ಕೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಅರುಣ್ ಕುಗ್ವೆ ಅವರ ತಮ್ಮ ಗಣೇಶ್ ವಿರುದ್ಧವೂ ಶಿವಮೊಗ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
‘ಅರುಣ್ ಕುಗ್ವೆ 2021ರಲ್ಲಿ ಪರಿಚಯವಾಗಿದ್ದರು. ಮದುವೆ ಆಗುವುದಾಗಿ ನಂಬಿಸಿ ಮಾತಿಗೆ ತಪ್ಪಿದ್ದರಿಂದ ಮಾರ್ಚ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದೆ. ನಂತರ ಮದುವೆ ಆಗುವುದಾಗಿ ಮತ್ತೆ ಭರವಸೆ ನೀಡಿದ್ದರು. ಈಗ ಮತ್ತೆ ಮೋಸ ಮಾಡಿದ್ದಾರೆ’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
‘ನನಗೆ ಗೊತ್ತಿಲ್ಲದಂತೆ ಖಾಸಗಿ ಕ್ಷಣಗಳ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದರು. ಮದುವೆ ವಿಷಯ ಪ್ರಸ್ತಾಪಿಸಿದಾಗ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು’ ಎಂದೂ ದೂರಿನಲ್ಲಿ ವಿವರಿಸಿದ್ದಾರೆ.