ಶಿವಮೊಗ್ಗ ದಸರಾ ಮೆರವಣಿಗೆ ಬಂದಿದ್ದ ಹೆಣ್ಣಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಹೌದು, ವಿಜಯದಶಮಿ ಆಚರಣೆಗೆ ಮುನ್ನ ಆನೆ ಮರಿ ಹಾಕಿದೆ. ಈ ಹೆಣ್ಣಾನೆ ಶಿವಮೊಗ್ಗದ ಸಕ್ರೆ ಬೈಲು ಆನೆ ಬಿಡಾರದಿಂದ ಬಂದಿತ್ತು. ನೇತ್ರಾವತಿ ಎಂಬ ಆನೆ ಮರಿ ಹಾಕಿದೆ.
ವಿಜಯದಶಮಿ ಅದ್ದೂರಿ ದಸರಾ ಆಚರಣೆಗೆ ಸಕ್ರೆಬೈಲ್ ಆನೆ ಬಿಡಾರದ ಮೂರು ಆನೆಗಳು ಶಿವಮೊಗ್ಗಕ್ಕೆ ಬಂದಿದ್ದವು. ಅಂಬಾರಿ ಹೊರಲು ಆಗಮಿಸಿದ್ದ ಸಾಗರ್ ಜೊತೆಯಲ್ಲಿ ಹೇಮಾವತಿ ಮತ್ತು ನೇತ್ರಾವತಿ ಆನೆಗಳು ಶಿವಮೊಗ್ಗ ನಗರದ ಎಲ್ಲೆಡೆ ತಾಲೀಮು ನಡೆಸಿದ್ದವು.
ಸೋಮವಾರವಷ್ಟೆ ಸಿಟಿ ರೌಂಡ್ಸ್ ಹಾಕಿದ್ದ ಆನೆಗಳ ಪೈಕಿ ಶುಭ ಸಮಯದಲ್ಲಿ ಶುಭ ಸುದ್ದಿಯೊಂದು ಹೊರಬಿದ್ದಿದೆ. ದಸರರಾ ಉತ್ಸವಕ್ಕೆ ಶಿವಮೊಗ್ಗಕ್ಕೆ ಬಂದ ಆನೆಗಳ ಪೈಕಿ ನೇತ್ರಾವತಿ ಮರಿಯನ್ನು ಹಾಕಿದೆ. ಬಿಡಾರದ ಹೆಣ್ಣಾನೆಗಳ ಪೈಕಿ ಬಾನುಮತಿ ಪ್ರೆಗ್ನೆಂಟ್ ಆಗಿದ್ದಳು. ಕುಂತಿ ಈಗಷ್ಟೆ ಮರಿ ಹಾಕಿದ್ದಳು. ನೇತ್ರಾವತಿ ಸಹ ಗರ್ಭಿಣಿ ಎನ್ನಲಾಗಿತ್ತು. ಹಾಗಾಗಿ ಯಾವ ಆನೆಗಳನ್ನು ಕರೆತರಬೇಕು ಎಂಬ ವಿಚಾರದಲ್ಲಿ ಕೊನೆಗೆ ನೇತ್ರಾವತಿಯನ್ನು ಕರೆತರಲಾಗಿದೆ. ಇದೀಗ ದಸರಾಕ್ಕೆ ಕರೆತಂದ ನೇತ್ರಾವತಿಯು ಮರಿ ಹಾಕಿದ್ದಾಳೆ. ಅಲ್ಲದೇ ಈ ಹಿಂದೆ ಕುಂತಿ ಆನೆ ಕೂಡ ದಸರಾ ಸಂದರ್ಭದಲ್ಲಿ ಮರಿ ಹಾಕಿದ್ದ ಘಟನೆ ನಡೆದಿತ್ತು.
ನೇತ್ರಾವತಿ ವಾಸವಿ ಶಾಲೆ ಆವರಣದಲ್ಲಿ ಮರಿ ಹಾಕಿದ್ದಾಳೆ. ಹೆಣ್ಣು ಮರಿ ಜನನವಾಗಿದ್ದು, ಆನೆ ಬಿಡಾರದ ಸಿಬ್ಬಂದಿಯಲ್ಲಿ ಹರ್ಷ ಮೂಡಿದೆ. ಇನ್ನೊಂದೆಡೆ ನೇತ್ರಾವತಿ ಮರಿ ಹಾಕಿರುವುದರಿಂದ ಜಂಬೂಸವಾರಿಯಲ್ಲಿ ಸಾಗರ್ ಆನೆ ಜೊತೆ ಹೇಮಾವತಿ ಆನೆಯನ್ನು ಸಹ ಬಳಸಿಕೊಳ್ಳಲು ಕಷ್ಟವಾಗಿದೆ. ಹೆಣ್ಣಾನೆ ಮರಿ ಹಾಕಿದ ನಂತರ ಅದರ ಜೊತೆಗಿನ ಸಂಬಂಧಿ ಆನೆ ಆರೈಕೆ ನೋಡಿಕೊಳ್ಳುತ್ತದೆ. ಸದ್ಯ ಜೊತೆಯಲ್ಲಿರುವ ಹೇಮಾವತಿ ಆನೆಯೇ ನೇತ್ರಾವತಿಯನ್ನ ಹಾಗೂ ಅದರ ಮರಿಯನ್ನು ನೋಡಿಕೊಳ್ಳುತ್ತಿದೆ.