Sunday, May 18, 2025

ಕಳ್ಳನಂತೆ ಬಂದು ಅಜ್ಜಿಯ ಚಿನ್ನಾಭರಣ ದೋಚಿದ ಮೊಮ್ಮಗ

ವಯೋವೃದ್ಧೆ ಅಜ್ಜಿಯನ್ನು ಕಳ್ಳನಂತೆ ಮುಖವಾಡ ಧರಿಸಿ ಬಂದು ಮೊಮ್ಮಗನೇ ದರೋಡೆ ನಡೆಸಿದ ಘಟನೆ ಭಟ್ಕಳದಲ್ಲಿ ನಡೆದಿದೆ. ಕಳ್ಳತನ ನಡೆಸಿ ತಾನೇ ಪೊಲೀಸರಿಗೆ ದೂರು ಕೊಟ್ಟು, ಸಿಸಿಟಿವಿ ದೃಶ್ಯದ ಜಾಡು ಹಿಡಿದ ಪೊಲೀಸರು ಪೋಲಿ ಮೊಮ್ಮಗನನ್ನು ಬಂಧಿಸಿದ್ದಾರೆ. ತಾಜಮ್ಮುಲ್ ಹಸನ್ ಅಸ್ಕೇರಿ ಬಂಧಿತ ಆರೋಪಿ.

ಮಾರ್ಚ್ 17 ರಂದು ಈ ಘಟನೆ ನಡೆದಿದೆ. ರಂಝಾನ್ ಹಿನ್ನಲೆ ಮನೆಯವರೆಲ್ಲಾ ಜೊತೆಯಾಗಿ ಸೇರಿ ಉಪಹಾರ ಸೇವಿಸಿದ್ದಾರೆ. ಆ ಬಳಿಕ ಪುರುಷರು ಬೆಳಗ್ಗಿನ ನಮಾಝ್‌ಗೆ ಮಸೀದಿಗೆ ತೆರಳಿದ್ದರು.. ಮಹಿಳೆಯರು ಪ್ರಾರ್ಥನೆಯಲ್ಲಿ ನಿರತರಾಗಿದ್ದರು. ಇದನ್ನೇ ಬಂಡವಾಳವಾಗಿಟ್ಟುಕೊಂಡ ಹಸನ್ ಅಸ್ಕೇರಿ ಮುಖವಾಡ ಧರಿಸಿ ಅಪರಿಚಿತ ವ್ಯಕ್ತಿಯಂತೆ ಮನೆಗೆ ನುಗ್ಗಿ ವಯೋವೃದ್ಧೆಯ ಬಾಯಿಯನ್ನು ಮುಚ್ಚಿ, ಕತ್ತು ಹಿಸುಕಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ.

ದರೋಡೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಭಟ್ಕಳ ನಗರ ಠಾಣೆ ಪೊಲೀಸರ ತಂಡ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಮನೆಯಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆಯನ್ನು ನಡೆಸಿದಾಗ ಈ ಕೃತ್ಯವು 4 ನಿಮಿಷಗಳಲ್ಲಿ ನಡೆದಿದೆ ಎಂಬುವುದನ್ನು ಪತ್ತೆ ಹೆಚ್ಚಿದರು. ದರೋಡೆಯ ಹಿನ್ನೆಲೆ ಸಂತ್ರಸ್ತೆಯ ಮೊಮ್ಮಗ ತಾಜಮ್ಮುಲ್ ಹಸನ್ ಅಸ್ಕೇರಿ(46) ಅಜ್ಜಿಯ ಪರವಾಗಿ ಪೊಲೀಸ್ ದೂರು ನೀಡಿದನು.

ಅಪರಾಧಿಯನ್ನು ಪತ್ತೆಹಚ್ಚಲು ಆತ ಪೊಲೀಸ್ ಅಧಿಕಾರಿಗಳಿಗೆ ಸಹಾಯ ಮಾಡುವಂತೆ ನಟಿಸಿದನು. ಆದರೆ, ತನಿಖೆ ಮುಂದುವರಿದಂತೆ ಪೊಲೀಸರು ಆತನನ್ನೇ ಬಂಧಿಸಿದ್ದಾರೆ.

Related Articles

Latest Articles