ಸೌದಿ ಅರೆಬಿಯಾದ ಮೆಕ್ಕಾದಲ್ಲಿರುವ ಕಅಬಾ ಎದುರು ನಿಯಮ ಉಲ್ಲಂಘಿಸಿ ಭಾರತ್ ಜೋಡೋ ಯಾತ್ರೆಯ ಫಲಕ ಪ್ರದರ್ಶಿಸಿ ಜೈಲು ಪಾಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತ ರಾಝಾ ಖಾದ್ರಿ ಎಂಟು ತಿಂಗಳ ಜೈಲು ಶಿಕ್ಷೆಯ ಬಳಿಕ ಬಿಡುಗಡೆಯಾಗಿದ್ದಾರೆ.
With input from News18Kannada
ಮಧ್ಯಪ್ರದೇಶದ ಝಾನ್ಸಿ ಜಿಲ್ಲೆಯ ನಿವಾಸಿ ಖಾದ್ರಿ ಎಂಬವರನ್ನು ನಿಯಮ ಉಲ್ಲಂಘಿಸಿದ ಅಪರಾಧದ ಅಡಿಯಲ್ಲಿ ಸೌದಿ ಪೊಲೀಸರು ಬಂಧಿಸಿದ್ದರು. ಇದೀಗ ಜೈಲಿನಲ್ಲಿ ತಾವು ಅನುಭವಿಸಿದ ಯಾತನೆಯನ್ನ ಕಾಂಗ್ರೆಸ್ ಕಾರ್ಯಕರ್ತ ಹೇಳಿಕೊಂಡಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಫಲಕವನ್ನು ಕಅಭಾದಲ್ಲಿ ತೋರಿಸಿ ಫೋಟೋವನ್ನು ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೇ ಇವರ ಪಾಲಿಗೆ ಮುಳುವಾಗಿದೆ. ಪೋಸ್ಟ್ ಅಪ್ಲೋಡ್ ಆದ ಎರಡು ದಿನಗಳ ನಂತರ ಅವರು ತಂಗಿದ್ದ ಹೋಟೆಲ್ ಅನ್ನು ಸೌದಿ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದರು. ಇಸ್ಲಾಮಿಕ್ ಪವಿತ್ರ ಸ್ಥಳಗಳು ಸೇರಿದಂತೆ ಸೌದಿ ಅರೇಬಿಯಾದಲ್ಲಿ ಯಾವುದೇ ರೀತಿಯ ಧ್ವಜ ಮತ್ತು ಫಲಕವನ್ನು ಪ್ರದರ್ಶಿಸುವುದು ಕಾನೂನುಬಾಹಿರವಾಗಿದ್ದರಿಂದ ಅವರನ್ನು ಬಂಧಿಸಲಾಗಿತ್ತು.
8 ತಿಂಗಳ ಕಾಲ ಬಂಧಿಸಿ, ಬೆಳಿಗ್ಗೆ ಮತ್ತು ಸಂಜೆ ಕೇವಲ ಎರಡು ಬ್ರೆಡ್ ಮಾತ್ರ ನೀಡುತ್ತಿದ್ದರು. ರಾತ್ರಿಯಿಡೀ ಮಲಗಲು ಬಿಡುತ್ತಿರಲಿಲ್ಲ. ಭಾರತೀಯ ರಾಯಭಾರಿ ಕಚೇರಿ ಕೂಡ ಅವರಿಗೆ ಸಹಾಯ ಮಾಡಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.
ನನ್ನನ್ನು ವಾಪಸ್ ಕರೆತರಲು ಕುಟುಂಬ 28 ಲಕ್ಷ ರೂಪಾಯಿ ಖರ್ಚು ಮಾಡಿದೆ. ವಂಚನೆಯಿಂದ ಬಹಳಷ್ಟು ಹಣ ಹೋಗಿದೆ. ನನ್ನನ್ನು ಬಿಡಿಸುವ ಹೆಸರಿನಲ್ಲಿ ಅನೇಕರು ನನ್ನ ಕುಟುಂಬದಿಂದ ಹಣ ವಸೂಲಿ ಮಾಡಿದ್ದಾರೆ. ಸೌದಿಯಲ್ಲಿನ ನಮ್ಮ ಭಾರತೀಯ ರಾಯಭಾರ ಕಚೇರಿ ಸಂಪೂರ್ಣವಾಗಿ ಸತ್ತಿದೆ ಎಂದು ಖಾದ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2 ತಿಂಗಳ ಕಾಲ ವಿಚಾರಣೆ ನಡೆಸಿದ್ದ ಪೊಲೀಸರು ಶಿಕ್ಷೆಯಾಗಿ 99 ಛಡಿ ಏಟು ಹೊಡೆದಿದ್ದರು ಎಂದು ತಿಳಿದುಬಂದಿದೆ.