ಪ್ರೀತಿಗೆ ಮನೆಯವರ ವಿರೋಧದಿಂದ ನೊಂದ ಯುವತಿ ಆತ್ಮಹತ್ಯೆ
ಪ್ರೀತಿಗೆ ಮನೆಯವರು ಬೇಡ ಎಂದಿದ್ದಕ್ಕೆ ಯುವತಿಯೋರ್ವಳು ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಟಿ. ದಾಸರಹಳ್ಳಿಯಲ್ಲಿ ನಡೆದಿದೆ.
ಸ್ನೇಹಾ (20) ಆತ್ಮಹತ್ಯೆಗೆ ಶರಣಾದ ಯುವತಿ. ಸ್ನೇಹಾ ನೆಲಮಂಗಲದ ಪದವಿ ಕಾಲೇಜೊಂದರಲ್ಲಿ ಬಿಕಾಂ ಓದುತ್ತಿದ್ದಳು. ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ಸಂತೋಷ್ ಎಂಬಾತನನ್ನು ಆಕೆ ಪ್ರೀತಿಸುತ್ತಿದ್ದಳು. ಈ ವಿಚಾರ ಸ್ನೇಹಾ ಮನೆಯವರಿಗೆ ತಿಳಿದು, ವಿರೋಧ ವ್ಯಕ್ತಪಡಿಸಿದ್ದಾರೆ.
ಸ್ನೇಹಾ ಆಗಸ್ಟ್ 16ರಂದು ಕಾಲೇಜಿಗೆ ಹೋಗಿದ್ದ ಸಂದರ್ಭದಲ್ಲಿ ಯುವಕನ ಜೊತೆ ಓಡಿಹೋಗಿದ್ದಳು. ಘಟನೆ ಕುರಿತು ಸ್ನೇಹಾಳ ಪೋಷಕರು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅದಾದ 3 ದಿನಗಳ ಬಳಿಕ ಪೊಲೀಸರು ಸ್ನೇಹಾ ಹಾಗೂ ಸಂತೋಷ್‌ನನ್ನು ಮಂಡ್ಯದಲ್ಲಿ ಪತ್ತೆ ಹಚ್ಚಿದ್ದರು.
ಬಳಿಕ ಪೋಷಕರು ಸ್ನೇಹಾಳನ್ನು ಆಕೆಯ ಅಜ್ಜಿ ಮನೆಗೆ ಕಳುಹಿಸಿದ್ದರು. ಪ್ರಿಯಕರನಿಂದ ಬೇರೆಯಾಗಿದ್ದರಿಂದ ಮನನೊಂದ ಸ್ನೇಹಾ ಮನನೊಂದು ನೇಣಿಗೆ ಶರಣಾಗಿದ್ದಾಳೆ. ಘಟನೆಗೆ ಸಂಬಂಧಿಸಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀತಿ ತಿರಸ್ಕರಿಸಿದ ಯುವತಿಯ ಕತ್ತು ಕೊಯ್ದು ತಾನೂ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ!
ಯುವತಿಯು ತನ್ನ ಪ್ರೀತಿಯನ್ನು ತಿರಸ್ಕರಿಸಿದ್ದಾಳೆ ಎಂದು ಆಕೆಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.
ಪ್ರಭಾಕರ್ ವಾಘರೆ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಪ್ರಭಾಕರ್, ಅರ್ಚನಾ (18) ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಆದರೆ ಅರ್ಚನಾ ಆತನ ಪ್ರೀತಿಯನ್ನು ತಿರಸ್ಕರಿಸಿದ್ದಳು. ಇದರಿಂದ ಕೋಪಗೊಂಡ ಪ್ರಭಾಕರ್ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದುಕೊಂಡಿದ್ದ. ಅದರಂತೆ ಅರ್ಚನಾ ತನ್ನ ಸಹಪಾಠಿಯೊಂದಿಗೆ ಕಾಲೇಜಿಗೆ ಹೋಗುವಾಗ ಆಕೆಯ ಮೇಲೆ ದಾಳಿ ನಡೆಸಿ ಆಕೆಯ ಕತ್ತು ಸೀಳಿ ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅರ್ಚನಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಅರ್ಚನಾ ಮೃತಪಟ್ಟ ಕೆಲವೇ ಗಂಟೆಯಲ್ಲೇ ಪ್ರಭಾಕರ್ ತಾನು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪಾಲ್ಘರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.