ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರ ಸೋಗಿನಲ್ಲಿ ಹಣ ಪೀಕಿಸುವ ದಂಧೆಯ ಬಗ್ಗೆ ಆಗಾಗೆ ವರದಿಯಾಗುತ್ತಲೇ ಇರುತ್ತದೆ. ಇದೀಗ ಬೆಂಗಳೂರು ಸಿಟಿ ಪೊಲೀಸರ ಹೆಸರಿನಲ್ಲಿ ಟ್ರಾಫಿಕ್ ಫೈನ್ ವಸೂಲಿ ಮಾಡುತ್ತಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇವರು ವ್ಯಾಟ್ಸಪ್ ಮೂಲಕ ಮೆಸೇಜ್ ಕಳಿಸಿ ದಂಡ ಕಟ್ಟಿಸಿಕೊಳ್ಳುತ್ತಿದ್ದರು.
ಈ ಹಿನ್ನಲೆ ಮೂವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮೂಲದ ರಂಜನ್ ಕುಮಾರ್ ಪೋರ್ಬಿ, ಇಸ್ಮಾಯಿಲ್ ಅಲಿ ಹಾಗೂ ಸುಭಿರ್ ಮಲ್ಲಿಕ್ ಬಂಧಿತರು.
ಈ ಆರೋಪಿಗಳ ಖತರ್ನಾಕ್ ಪ್ಲ್ಯಾನ್ಗೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಮೃತ ಹೆಡ್ ಕಾನ್ಸ್ಟೇಬಲ್ವೊಬ್ಬರ ಐಡಿ ಕಾರ್ಡ್ ಬಳಸಿ ಟ್ರಾಫಿಕ್ ಫೈನ್ ಆ್ಯಪ್, ಸಾರಿಗೆ ಇಲಾಖೆ ವೆಬ್ ಸೈಟ್ಗಳಿಂದ ಸವಾರರ ಮಾಹಿತಿ ಪಡೆದು, ಬಳಿಕ ತಾವು ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಎಂದು ಸವಾರರಿಗೆ ನಕಲಿ ಐಡಿ ಕಾರ್ಡ್ ಕಳಿಸಿ, ಬಳಿಕ ಯುಪಿಐ ಐಡಿ ಕಳಿಸಿ ಮೊಬೈಲ್ ಮೂಲಕವೇ ದಂಡ ವಸೂಲಿ ಮಾಡುತ್ತಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ಮೃತ ಹೆಡ್ ಕಾನ್ಸ್ ಟೇಬಲ್ ಮಗಳು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.