ಭತ್ತ ಹಾಗೂ ಇತರ ಹಲವಾರು ಕೃಷಿ ಸಂಬಂಧಿ ಸಸ್ಯಗಳ ನೂರಾರು ತಳಿಗಳನ್ನು ಸಂಗ್ರಹಿಸಿ, ಬೆಳೆಸಿರುವ ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಗ್ರಾಮದ ರೈತ ಅಮೈ ಬಿ.ಕೆ. ದೇವರಾವ್ ಅವರಿಗೆ ‘ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ’ 2020- 21 ಲಭಿಸಿದೆ. ಸೆಪ್ಟೆಂಬರ್ 12ರಂದು ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.
ದೇಶದ 10, ಕರ್ನಾಟಕದ ಇಬ್ಬರಿಗೆ ಈ ಪ್ರಶಸ್ತಿ ಸಿಕ್ಕಿದ್ದು ಅದು ಒಂದೂವರೆ ಲಕ್ಷ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಹೊಂದಿದೆ.
ದೇಶದ 150ಕ್ಕೂ ಅಧಿಕ ಜಾತಿಯ ಭತ್ತದ ತಳಿಗಳು ಇವರಲ್ಲಿದೆ. ಕರ್ನಾಟಕದ್ದೇ ಬರೋಬ್ಬರಿ 117, ಕೇರಳದ 25, ತಮಿಳುನಾಡಿನ 10, ಪಶ್ಚಿಮ ಬಂಗಾಳದ 5, ಮಹಾರಾಷ್ಟ್ರದ 2, ಆಂಧ್ರಪ್ರದೇಶ, ಛತ್ತಿಸ್ ಗಡ, ಮಣಿಪುರ, ದೆಹಲಿ, ಜಾರ್ಖಂಡ್, ಅಸ್ಸಾಂ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಮೊದಲಾದ ರಾಜ್ಯಗಳ ಭತ್ತದ ತಳಿಗಳು ಇವರ ಸಂಗ್ರಹದಲ್ಲಿರುವುದು ವಿಶೇಷ.
ತಮ್ಮ ಐದು ಎಕರೆ ಗದ್ದೆಯಲ್ಲಿ 175ಕ್ಕೂ ಅಧಿಕ ಭತ್ತದ ತಳಿಗಳನ್ನು ಬೆಳೆದಿರುವ ಸಾಧಕ. ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದು, ಪ್ರತಿಸಲವೂ 50 ಕ್ವಿಂಟಾಲ್‌ಗಿಂತಲೂ ಅಧಿಕ ಇಳುವರಿ ಸಿಗುತ್ತಿದೆ.
ಹಿಂದೆ ಏಳು ಜೋಡು ಎತ್ತುಗಳಿಂದ ಗದ್ದೆಯನ್ನು ಹಸನು ಮಾಡಿ ಕೃಷಿ ಮಾಡುತ್ತಿದ್ದ ಇವರು 25 ವರ್ಷಗಳಿಂದ ಟಿಲ್ಲರ್ ಉಪಯೋಗಿಸಿಕೊಂಡು ಗದ್ದೆಯನ್ನು ಉಳುತ್ತಿದ್ದಾರೆ. ಒಂದೇ ಗದ್ದೆಯಲ್ಲಿ ಅನೇಕ ಬಗೆಯ ತಳಿಗಳನ್ನು ನಾಟಿ ಮಾಡುವ ದೇವರಾವ್ ಇದು ಯಾವ ತಳಿ ಎಂಬುದನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದಾರೆ.
ದೇವರಾವ್ ಅವರ ಪುತ್ರ ಬಿ.ಕೆ. ಪರಮೇಶ್ವರ್ ರಾವ್ ಅವರು ತಂದೆಯ ಸಾಧನೆಗೆ ಬೆನ್ನೆಲುಬಾಗಿದ್ದಾರೆ. ಬೀಜ ಬ್ಯಾಂಕ್ ಸ್ಥಾಪಿಸಿ, ಬೇಡಿಕೆ ಇಡುವ ರೈತರಿಗೆ ತಮ್ಮ ತಂದೆಯ ಸಂಗ್ರಹದಲ್ಲಿರುವ ಭತ್ತದ ತಳಿಯ ಒಂದು ಮುಷ್ಟಿ ಭತ್ತ ನೀಡುವ ಯೋಜನೆ ಕೈಗೊಂಡಿದ್ದಾರೆ. ಒಂದು ಮುಷ್ಟಿ ಭತ್ತ ಒಯ್ಯುವ ರೈತ ಇದರ ಬೆಳೆ ಬೆಳೆದ ಬಳಿಕ ಎರಡು ಮುಷ್ಟಿ ಭತ್ತವನ್ನು ಇವರಿಗೆ ನೀಡಬೇಕು. ಇದರಿಂದ ಭತ್ತದ ತಳಿಗಳು ಹೆಚ್ಚು ಕಡೆ ಬೆಳೆಯಲು ಹಾಗೂ ಬೇಡಿಕೆ ಸಲ್ಲಿಸುವವರಿಗೆಲ್ಲ ನೀಡಲು ಸಹಕಾರಿಯಾಗುತ್ತದೆ.
ಹಿಂದೆ ನಾಲ್ಕು ಬೆಳೆಯನ್ನು ಬೆಳೆಯುತ್ತಿದ್ದ ದೇವರಾವ್ ಅವರು, ಕೆಲ ವರ್ಷಗಳಿಂದ ಎಣೆಲು ಮತ್ತು ಸುಗ್ಗಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಭತ್ತದ ವಿವಿಧ ತಳಿಗಳಲ್ಲೂ ದೀರ್ಘಾವಧಿ ಬೆಳೆ ಹಾಗೂ ಅಲ್ಪಾವಧಿ ಬೆಳೆಯನ್ನು ಮಾಡುತ್ತಿದ್ದಾರೆ.
1988 ರಿಂದ ರಾಸಾಯನಿಕ ಬಳಕೆಗೆ ಸಂಪೂರ್ಣ ವಿದಾಯ ಹೇಳಿದ್ದಾರೆ. ಹಟ್ಟಿಯ ಗೊಬ್ಬರನ್ನು ಬಳಸುವ ಇವರು ಭತ್ತವನ್ನು ಮನೆಯಲ್ಲಿಯೇ ಒಣಗಿಸಿ, ಅಕ್ಕಿ ಮಾಡುತ್ತಾರೆ. ದೇವ ರಾವ್ ಮನೆಗೇ ಬಂದು ಜನರು ಅಕ್ಕಿ ಖರೀದಿಸುತ್ತಿರುವುದು ವಿಶೇಷ.
‘ರಾಷ್ಟ್ರಪತಿಗಳಿಂದ 150ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತಳಿಗಳ ಸಂಗ್ರಹ ಹಾಗೂ ಅವುಗಳನ್ನು ಬೆಳೆಸುವ ಕೆಲಸ ಮಾಡುವ ಉತ್ಸಾಹ ಹೊಂದಿದ್ದೇನೆ’ ಎಂದು ಬಿ.ಕೆ.ದೇವರಾವ್ ಪ್ರತಿಕ್ರಿಯಿಸಿದ್ದಾರೆ.