Monday, September 16, 2024

ಮಂಗಳೂರು: ದಂಡ ವಿಧಿಸಿದ್ದಕ್ಕೆ ವಾಹನಕ್ಕೇ ಬೆಂಕಿ ಹಚ್ಚಲು ಯತ್ನ – ಆಟೋ ಚಾಲಕನ ವಿರುದ್ಧ ಎಫ್‌ಐಆರ್

ದಕ್ಷಿಣ ಕನ್ನಡ: ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುತ್ತಾರೆ. ಅದೇ ರೀತಿ, ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿ ರೋಡ್​ನಲ್ಲಿ ಆಟೋ ಚಾಲಕನಿಗೆ ದಂಡ ವಿಧಿಸಲಾಗಿದೆ. ಆದರೆ ದಂಡ ವಿಧಿಸಿದ್ದಕ್ಕೆ ಕೋಪಗೊಂಡ ಆಟೋ ಚಾಲಕ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಪೊಲೀಸ್ ವಾಹನಕ್ಕೇ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ.

ಬಿಸಿ ರೋಡ್​ನಲ್ಲಿ ಸಮವಸ್ತ್ರ ಧರಿಸದೆ ಮೊಬೈಲ್​ನಲ್ಲಿ ಮಾತಾಡುತ್ತ ಆಟೋ ಚಲಾಯಿಸುತ್ತಿರುವುದನ್ನು ಗಮನಿಸಿದ ಟ್ರಾಫಿಕ್ ಪಿಎಸ್​ಐ ಸುತೇಶ್ ಮತ್ತು ಸಿಬ್ಬಂದಿ ಆಟೋ ತಡೆದಿದ್ದಾರೆ. ಅಲ್ಲದೆ, ಸಂಚಾರಿ ನಿಯಮ ಉಲ್ಲಂಘಿಸಿದ ಹಿನ್ನೆಲೆ 2,000 ರೂಪಾಯಿ ದಂಡ ವಿಧಿಸಿದ್ದಾರೆ. ಇದರಿಂದ ಕೋಪಗೊಂಡ ಗೂಡಿನ ಬಳಿ‌ ನಿವಾಸಿ ಆಟೋ ಚಾಲಕ ಮೊಹಮ್ಮದ್ ಅನ್ಸಾರ್, ಸಾರ್ವಜನಿಕವಾಗಿ ರಂಪಾಟ ನಡೆಸಿದ್ದಾನೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ವಾಹನ ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಆಟೋ ಹಾಗೂ ಪೊಲೀಸ್ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಘಟನೆ ದೃಶ್ಯ ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿದೆ. ಪ್ರಕರಣ ಸಂಬಂಧ ಅನ್ಸಾರ್ ವಿರುದ್ಧ ಬಂಟ್ವಾಳ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles