Wednesday, June 19, 2024

ದಕ್ಷಿಣ ಕನ್ನಡ: ನಿರುದ್ಯೋಗದ ಚಿಂತೆ; ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾತನನ್ನು ರಕ್ಷಿಸಿದ ಮುಸ್ಲಿಂ ಯುವಕರು

ದಕ್ಷಿಣ ಕನ್ನಡ: ಪದವೀಧರನಾಗಿಯೂ ನಿರುದ್ಯೋಗಿಯಾದ ಮನನೊಂದ ಪುತ್ತೂರು ಮೂಲದ ಯುವಕನೋರ್ವ ಪಾಣೆಮಂಗಳೂರಿನ ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ‌. ಅದೃಷ್ಟವಶಾತ್ ಈ ವೇಳೆ ಸ್ಥಳೀಯ ಯುವಕರ ತಂಡ ಆತನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿ ಮಾನವೀಯತೆಯ ಮೆರೆದಿದ್ದಾರೆ.

ಪುತ್ತೂರಿನ ಆನಂದ ಎಂಬವರ ಪುತ್ರ ನಿಶ್ಚಿತ್ (25) ಎಂಬವರು ಪಾಣೆಮಂಗಳೂರಿನಲ್ಲಿ ನೇತ್ರಾವತಿಗೆ ಹಾರಲು ಯತ್ನಿಸಿದ ಯುವಕ. ಈತ ಎಂ ಎಸ್ ಡಬ್ಲ್ಯು ಪದವೀಧರನಾಗಿದ್ದು, ಸೂಕ್ತ ಉದ್ಯೋಗ ದೊರೆಯದ ಹಿನ್ನಲೆಯಲ್ಲಿ ಮಾನಸಿಕ ಖಿನ್ನತೆಗೊಳಗಾಗಿ ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇವರು ವಾಹನ ನಿಲ್ಲಿಸಿ ನದಿಗೆ ಹಾರುವ ಸಿದ್ದತೆಯಲ್ಲಿದ್ದಾಗ ಗಮನಿಸಿದ ಸ್ಥಳೀಯ ನಿವಾಸಿ ಯುವಕರಾದ ಹನೀಫ್@ಹನೀಫ್ ಬಾಯಿ, ಸಲ್ಮಾನ್ ಫಾರಿಸ್, ಇರ್ಫಾನ್ ಖಲೀಲ್, ನೌಫಲ್ ಸಿ ಪಿ, ತಸ್ಲೀಂ ಆರೀಫ್, ಮುಖ್ತಾರ್ ಅಕ್ಕರಂಗಡಿ, ಪಿ.ಎಂ. ಆರಿಫ್ ಹಾಗೂ ಮಮ್ಮು ಗೂಡಿನಬಳಿ ಅವರ ತಂಡ ಸಕಾಲದಲ್ಲಿ ಕಾರ್ಯಪ್ರವೃತ್ತರಾಗಿ ನಿಶ್ಚಿತ್ ನನ್ನು ಆತ್ಮಹತ್ಯೆಯ ದವಡೆಯಿಂದ ಪಾರು ಮಾಡಿ 112 ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ. ರಕ್ಷಣೆ ಮಾಡಿದ ಯುವಕರಿಗೆ ಮೆಚ್ಚುಗೆ ವ್ಯಕ್ತವಾಗಿದೆ.

Related Articles

Latest Articles