ಬಂಟ್ವಾಳ: ನೇತ್ರಾವತಿ ನದಿಗೆ ಈಜಲು ಹೋದ ಬಾಲಕ ನೀರು ಪಾಲಾಗಿ ಅಸುನೀಗಿದ ದುರ್ಘಟನೆ ನಡೆದಿದೆ. ಕಡೇಶ್ವಾಲ್ಯ ಸಮೀಪದ ನೆಚ್ಚಬೆಟ್ಟು ಎಂಬಲ್ಲಿ ಶನಿವಾರ ಸಂಜೆಯ ವೇಳೆಗೆ ಈ ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿ ಸಹೀರ್ ಎಂಬವರ ಪುತ್ರ ಸುಹೈಲ್ (13) ಮೃತಪಟ್ಟ ಬಾಲಕ.
ಕೆಮ್ಮನ್ ಪಳಿಕೆ ಶಾಲೆಯಲ್ಲಿ ಕಲಿಯುತ್ತಿದ್ದ ಸುಹೈಲ್ 7 ನೇ ತರಗತಿ ತೇರ್ಗಡೆ ಹೊಂದಿದ್ದ. ನೆಚ್ಚಬೆಟ್ಟು ತನ್ನ ಮನೆ ಸಮೀಪದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಂದ ಸ್ನೇಹಿತರ ಜೊತೆಗೆ ಪಕ್ಕದ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದು ಆ ವೇಳೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ನದಿ ದಡದಿಂದ ಬೊಬ್ಬೆ ಕೇಳಿ ಬಂದ ಹಿನ್ನಲೆಯಲ್ಲಿ ಹತ್ತಿರದಲ್ಲೇ ಕ್ರಿಕೆಟ್ ಆಟವಾಡುತ್ತಿದ್ದ ಯುವಕರು ಸುಹೈಲ್ ನನ್ನು ನದಿಯಿಂದ ಮೇಲಕ್ಕೆತ್ತಿದ್ದು ಅದಾಗಲೇ ಆತ ಮೃತಪಟ್ಟಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.