ಢಾಕಾ: ಕಿಶೋರ್‌ಗಂಜ್‌ನಿಂದ ಢಾಕಾಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿಗೆ ಸರಕು ಸಾಗಣೆ ರೈಲು ಹಿಂದಿನಿಂದ ಡಿಕ್ಕಿ ಹೊಡೆದು ಕನಿಷ್ಠ 20 ಮಂದಿ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ವರದಿಯಾಗಿದೆ.
ಢಾಕಾದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಕಿಶೋರಗಂಜ್ ಜಿಲ್ಲೆಯ ಭೈರಬ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಢಾಕಾಕ್ಕೆ ಹೋಗುವ ಎಗರೋಸಿಂದೂರ್ ಗೋಧೂಲಿ ಎಕ್ಸ್‌ಪ್ರೆಸ್‌ನ ಹಿಂಭಾಗದ ಕೋಚ್‌ಗಳಿಗೆ, ಚಟ್ಟೋಗ್ರಾಮ್ ಕಡೆಗೆ ಸಾಗುತ್ತಿದ್ದ ಸರಕು ಸಾಗಣೆ ರೈಲು ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದೆ ಎಂದು, ಅಲ್ಲಿನ ಅಧಿಕಾರಿ ಸಿರಾಜುಲ್ ಇಸ್ಲಾಂ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಇಲ್ಲಿಯವರೆಗೆ ಇಪ್ಪತ್ತು ಶವಗಳನ್ನು ಗುರುತಿಸಲಾಗಿದೆ. ನಾವು ರಕ್ಷಣಾ ಕಾರ್ಯಾಚರಣೆಗಳಿಗೆ ಸಾಧ್ಯವಿರುವ ಎಲ್ಲ ಕೆಲಸ ಮಾಡುತ್ತಿದ್ದೇವೆ” ಎಂದು ಅಪರಾಧ ವಿರೋಧಿ ರಾಪಿಡ್ ಆಕ್ಷನ್ ಬೆಟಾಲಿಯನ್‌ನ ಮುಖ್ಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.
ಸ್ಥಳದಲ್ಲಿದ್ದ ಅಗ್ನಿಶಾಮಕ ದಳದ ಅಧಿಕಾರಿಗಳು ಮೂರು ಪ್ರಯಾಣಿಕರ ಬೋಗಿಗಳನ್ನು ಮೇಲಕ್ಕೆತ್ತಿದ್ದಾರೆ. ಸುಮಾರು 100 ಗಾಯಗಳನ್ನು ರಕ್ಷಿಸಿ ವಿವಿಧ ಆರೋಗ್ಯ ಕೇಂದ್ರಗಳಿಗೆ ರವಾನಿಸಲಾಗಿದೆ. ಹಳಿ ತಪ್ಪಿರುವ ಬೋಗಿಗಳ ಅಡಿಯಲ್ಲಿ ಅನೇಕ ಜನರು ಸಿಲುಕಿಕೊಂಡಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.