Tuesday, March 18, 2025

ಲಕ್ಷಾಂತರ ಮೌಲ್ಯದ ಚಿನ್ನ ಖರೀದಿಸಿ ಫೇಕ್ ಪೇಮೆಂಟ್ – ಖತರ್ನಾಕ್‌ ಜೋಡಿ ಸಿಕ್ಕಿಬಿದ್ದದ್ದೇ ರೋಚಕ

ಶ್ರೀಮಂತರ ರೀತಿಯಲ್ಲೇ ಶೋಕಿಯಿಂದ ಬಂದು, ಚಿನ್ನ ಖರೀದಿಸಿ ಲಕ್ಷಾಂತರ ವಂಚಿಸುತ್ತಿದ್ದ ಖತರ್ನಾಕ್‌ ಜೋಡಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಚಿನ್ನದ ಅಂಗಡಿಗೆ ಬಂದ ಜೋಡಿ, ಚಿನ್ನ ಖರೀದಿಸುವುದರಲ್ಲಿ ಬ್ಯುಸಿಯಾಗಿರುತ್ತಿತ್ತು. ಅಂಗಡಿ ಮಾಲೀಕರು ಈ ಜೋಡಿ ಕೇಳಿದ್ದನ್ನೆಲ್ಲಾ ಕೊಡುತ್ತಿದ್ದರು. ಒಳ್ಳೆಯ ವ್ಯಾಪಾರ ಆಗ್ತಿತ್ತು ಅಂದುಕೊಳ್ಳುತ್ತಿದ್ದ ಚಿನ್ನದಂಗಡಿ ಮಾಲೀಕನ ಖುಷಿ ಇರುತ್ತಿದ್ದದ್ದು ಕೇವಲ ಅರ್ಧಗಂಟೆ ಮಾತ್ರ. ಈ ಜೋಡಿ ಶಾಪಿಂಗ್‌ ಮಾಡ್ತಿದ್ದ ರೀತಿ ನೋಡಿ, ಅಂಗಡಿ ಮಾಲೀಕರೇ ಬೆಚ್ಚಿ ಬೀಳುತ್ತಿದ್ದರು.

ಡಿಜಿಟಲ್‌ ಪೇಮೆಂಟ್‌ ಆ್ಯಪ್‌ಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಈ ಜೋಡಿ, ಫೇಕ್‌ ಪೇಮೆಂಟ್‌ ಆ್ಯಪ್‌ ( Fake Payment App) ಮೂಲಕ ಹಣ ಪಾವತಿ ಮಾಡಿರುವುದಾಗಿ ತೋರಿಸಿ, ವಂಚಿಸುತ್ತಿದ್ದರು. ಅದೇ ರೀತಿ ಬ್ಯಾಡರಹಳ್ಳಿ ವ್ಯಾಪ್ತಿಯ ಆಭರಣದ ಅಂಗಡಿಯಲ್ಲೂ ಅದೇ ರೀತಿ ನಾಟಕ ಮಾಡಿ ಎಸ್ಕೇಪ್‌ ಆಗಿದ್ದರು. 15 ದಿನಗಳ ಬಳಿಕ ಬ್ಯಾಡರಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

15 ದಿನದ ಹಿಂದೆ ಗೊಲ್ಲರಹಟ್ಟಿಯಲ್ಲಿರುವ ಪರಮೇಶ್ವರ ಬ್ಯಾಂಕರ್ಸ್ ಅಂಡ್‌ ಜ್ಯೂವೆಲರ್ಸ್‌ ಆಭರಣ ಅಂಗಡಿಗೆ ಈ ಜೋಡಿ ಬಂದಿತ್ತು. 1.65 ಲಕ್ಷ ರೂ. ಮೌಲ್ಯದ 36 ಗ್ರಾಂ ಚಿನ್ನಾಭರಣ ಖರೀದಿ ಮಾಡಿದ್ದಾರೆ. ಬಳಿಕ ಆನ್‌ಲೈನ್‌ ಮೂಲಕ ಹಣ ಪಾವತಿಸಿ ಹೊರಟಿದ್ದಾರೆ. ಹಣ ಪಾವತಿಸಿದ ಸಂದೇಶವನ್ನು ಮಾಲೀಕರಿಗೆ ತೋರಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಅಂಗಡಿ ಮಾಲೀಕ ತಮ್ಮ ಖಾತೆಯನ್ನು ಪರಿಶೀಲಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ.

ಘಟನೆ ಸಂಬಂಧ ಅಂಗಡಿ ಮಾಲೀಕ ದೂರಿನ ಮೇರೆಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರತು ತನಿಖೆ ಆರಂಭಿಸಿದ್ದ ಪೊಲೀಸರು 15 ದಿನಗಳ ಬಳಿಕ ಆರೋಪಿಗಳನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು 1.30 ಲಕ್ಷ ಚಿನ್ನ ಅಡಮಾನ ಇಟ್ಟಿರೋದು ಗೊತ್ತಾಗಿದೆ. ಅಷ್ಟೇ ಅಲ್ಲ, ಇದೇ ರೀತಿ ಹಲವು ಚಿನ್ನದ ಅಂಗಡಿಗಳಲ್ಲಿ ವಂಚಿಸಿರುವ ಸಂಗತಿ ಬೆಳಕಿಗೆ ಬಂದಿದೆ.

Related Articles

Latest Articles