ಮಂಗಳೂರು: ದಾರಿ ಮಧ್ಯೆ ಹೃದಯಾಘಾತಕ್ಕೆ ಒಳಗಾದ ಆಟೋ ರಿಕ್ಷಾ ಚಾಲಕರೊಬ್ಬರಿಗೆ ವೈದ್ಯರೊಬ್ಬರು ಸಕಾಲದಲ್ಲಿ ನೆರವಾಗಿ ಜೀವ ಉಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಬಳಿ ನಡೆದಿದೆ.
ಹೃದ್ರೋಗ ತಜ್ಞ ಡಾ ಪದ್ಮನಾಭ ಕಾಮತ್ ಅವರು ರೋಗಿಗೆ ಸಕಾಲದಲ್ಲಿ ನೆರವಾದ ವೈದ್ಯರು. ಡಾ. ಕಾಮತ್ ಸ್ವಂತ ಖರ್ಚಿನಲ್ಲಿ ಔಷಧ ಖರೀದಿಸಿ ಜೀವ ಉಳಿಸಿದ್ದಾರೆ.
ಕಟೀಲು ದುರ್ಗಾ ಸಂಜೀವಿನಿ ಆಸ್ಪತ್ರೆಗೆ ಡಾ.ಕಾಮತ್ ಅವರು ಪ್ರತಿ ತಿಂಗಳ ಕೊನೆಯ ಶುಕ್ರವಾರದಂದು ಭೇಟಿ ನೀಡುತ್ತಾರೆ. ಪೆರ್ಮುದೆಯ 50 ವರ್ಷದ ಆಟೋ ಚಾಲಕ ನಾರಾಯಣ ಎಂಬವರು ಕಳೆದ ಶುಕ್ರವಾರ ದುರ್ಗಾ ಸಂಜೀವಿನಿ ಆಸ್ಪತ್ರೆಗೆ ಡಾ.ಕಾಮತ್ ಅವರನ್ನು ಭೇಟಿ ಮಾಡಲು ಬರುತ್ತಿದ್ದರು. ಈ ವೇಳೆ ದಾರಿ ಮಧ್ಯೆ ನಾರಾಯಣ ಅವರಿಗೆ ಹೃದಯಾಗಘಾತವಾಗಿದೆ.
ನಾರಾಯಣ ಅವರಿಂದ ಮಾಹಿತಿ ಪಡೆದ ಡಾ.ಕಾಮತ್ ಅವರು ಕೂಡಲೇ ಸ್ಥಳೀಯ ಔಷಾಧಾಲಯದಿಂದ ಜೀವರಕ್ಷಕ ಚುಚ್ಚುಮದ್ದು ಖರೀದಿಸಿ ನಾರಾಯಣ ಅವರಿದ್ದ ಸ್ಥಳಕ್ಕೆ ಹೋಗಿ ಜೀವ ಉಳಿಸಿದ್ದಾರೆ.